- ಬೇಲ್ ನೀಡಿದರೆ ವಿಚಾರಣೆಗೆ ಕಷ್ಟ ಎಂದ ನ್ಯಾಯಾಲಯ
ಬೆಂಗಳೂರು: ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ನವದೆಹಲಿಯ ರಾಜೀವ್ ಸಿಂಗ್ ಅರೋರಾ ಎಂಬಾತನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ನ ಕಲಬುರಗಿ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತ್ಯಾಗರಾಜ ಎನ್. ಇನಾವಳಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಇತರ ಆರೋಪಿಗಳಿಗೆ ಜಾಮೀನು ನೀಡಿದ್ದು, ಅದನ್ನು ತನಗೂ ವಿಸ್ತರಿಸಬೇಕು ಎಂದು ಆರೋಪಿ ಮನವಿ ಮಾಡಿಕೊಂಡಿದ್ದ. ಇದನ್ನು ತಿರಸ್ಕರಿಸಿರುವ ನ್ಯಾಯಪೀಠ, ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿದ ಆರೋಪ ಅರ್ಜಿದಾರನ ಮೇಲಿದೆ. ಇತರರು ಅವುಗಳನ್ನು ಹಂಚಿಕೆ ಮಾಡಿದ್ದಾರೆ. ಆದ್ದರಿಂದಇತರ ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಎಂಬ ಕಾರಣದಿಂದ ಅರ್ಜಿದಾರರಿಗೂ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.
ನ್ಯಾಯಾಲಯದಲ್ಲಿ ಪ್ರಕರಣ ವಿಳಂಬವಾಗುತ್ತಿರುವುದಕ್ಕೆ -ಆರೋಪಿಗಳು ಸಕಾಲಕ್ಕೆ ಕೋರ್ಟ್ಗೆ ಹಾಜರಾಗದಿರುವುದೇ ಕಾರಣವಾಗಿದೆ. ಅರ್ಜಿದಾರ ಆರೋಪಿ ರಾಜ್ಯದ ವ್ಯಾಪ್ತಿಯಿಂದ ಹೊರಗಿರುವ ನವದೆಹಲಿಯ ಖಾಯಂ ನಿವಾಸಿಯಾಗಿದ್ದಾನೆ. ಒಂದು ವೇಳೆ ಜಾಮೀನು ಮಂಜೂರಾದರೆ ಮುಂದಿನ ವಿಚಾರಣೆಗೆ ಹಾಜರುಪಡಿಸುವುದು ಕಷ್ಟ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ:
ಕಲಬುರಗಿಯ ಬಟ್ಟೆ ಅಂಗಡಿಯೊಂದರಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಲೋಗೋಗಳನ್ನು ಬಳಕೆ ಮಾಡಿ ನಕಲಿ ಅಂಕ ಪಟ್ಟಿಗಳನ್ನು ಮಾರಾಟ ಮಾಡುತ್ತಿರುವ ಸಂಬಂಧ ಸ್ಥಳಿಯ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸ್ವಯಂಪೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಂಗಡಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ನವಸೆಹಲಿ ಮೂಲದ ರಾಜೀವ್ ಸಿಂಗ್ ಅರೋರಾ ಅಲಿಯಾಸ್ ಅಭನೀಶ್ ಕುಮಾರ್ ಪ್ರಧಾನ ಆರೋಪಿಯಾಗಿದ್ದಾನೆ.