High court 
ರಾಜ್ಯ

ನ್ಯಾಯಾಧೀಶೆ ವರ್ತನೆ ಖಂಡಿಸಿದ ಹೈಕೋರ್ಟ್​| High court

ಬೆಂಗಳೂರು: ಖಾಸಗಿ ಕಾರಿನಲ್ಲಿ ತೆರಳುವಾಗ ದ್ವಿಚಕ್ರ ವಾಹನ ಸವಾರರು ಓವರ್​ಟೇಕ್​ ಮಾಡಿದ ಕಾರಣಕ್ಕಾಗಿ ಅವರೊಂದಿಗೆ ಗಲಾಟೆ ನಡೆಸಿ, ಪೊಲೀಸರಿಗೆ ಒತ್ತಡ ಹಾಕಿ ಸವಾರರ ಬಂಧನಕ್ಕೆ ಕಾರಣವಾಗಿದ್ದ ಕೋಲಾರ ಜಿಲ್ಲೆಯ ಮಾಲೂರಿನ ಚೀಫ್ ಜುಡಿಷಿಯಲ್​ ಮತ್ತು ಜೆಎಂಎಫ್​ಸಿ ಕೋರ್ಟ್​ನ ಪ್ರಧಾನ ನ್ಯಾಯಾಧೀಶೆ ಗಾಯತ್ರಿ ಅವರ ನಡೆಯನ್ನು ಹೈಕೋರ್ಟ್​ ಖಂಡಿಸಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್​ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಕೆ.ಎಂ. ವಿನಯ್​ ಸೇರಿ ಮೂವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣಕ್ಕೆ ತಡೆ ನೀಡಿದೆ. ನ್ಯಾಯಾಧೀಶೆಯ ವರ್ತನೆಯೂ ಅವರ ಹುದ್ದೆಯ ನೆತೆಯನ್ನು ಮೀರಿದೆ ಎಂದು ಅವಲೋಕನ ಮಾಡಿರುವ ನ್ಯಾಯಪೀಠ, ಅವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲು ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ. 

ಅಧಿಕಾರ ದುರುಪಯೋಗ:

ನ್ಯಾಯಾಧೀಶೆಯು ತಮ್ಮ ಪತಿಯೊಂದಿಗೆ ಖಾಸಗಿ ಕಾರಿನಲ್ಲಿ ತೆರಳುತ್ತಿದ್ದಾಗ ದ್ವಿಚಕ್ರ ವಾಹನ ಸವಾರರು ಕಾರನ್ನು ಓವರ್​ಟೇಕ್​ ಮಾಡಿ, ಮೆಲ್ಲಗೆ ಚಾಲನೆ ಮಾಡುವಂತೆ ಹೇಳಿದ್ದರು. ಇದರಿಂದ ಕೆರಳಿದ ನ್ಯಾಯಾಂಗ ಅಧಿಕಾರಿಯು ದ್ವಿಚಕ್ರ ವಾಹನವನ್ನು ಹಿಂಬಾಲಿಸಿ ಗಲಾಟೆ ಮಾಡಿದ್ದರು. ಈ  ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಹೈಕೋರ್ಟ್​, ನ್ಯಾಯಾಂಗ ಅಧಿಕಾರಿಯ ಈ ವರ್ತನೆಯು ಅವರ ಹುದ್ದೆಗೆ ತಕ್ಕದ್ದಲ್ಲ ಮತ್ತು ಅಧಿಕಾರದ ದುರುಪಯೋಗಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ನಂತರ ಅವರು ಮಧ್ಯರಾತ್ರಿಯವರೆಗೂ ಪೊಲೀಸ್​ ಠಾಣೆಯ ಹೊರಗೆ ಕಾದು ಕುಳಿತು, ಅರ್ಜಿದಾರರ ಬಂಧನಕ್ಕೆ ಕಾರಣರಾಗಿದ್ದರು. ಅರ್ಜಿದಾರರಲ್ಲಿ 72 ವರ್ಷದ ವೃದ್ಧರೂ ಸೇರಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ನ್ಯಾಯಾಧೀಶೆ ಹೇಳಿದ್ದಾರೆ ಎಂದ ಮಾತ್ರಕ್ಕೆ ಸಾರ್ವಜನಿಕರನ್ನು ಈ ರೀತಿ ನಡೆಸುಕೊಳ್ಳುವುದು ಸರಿಯಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ℹ️

ವೈಯಕ್ತಿಕ ಆಸ್ತಿ ಎಂದುಕೊಂಡಿದ್ದಾರೆ. 

ಈ ಹಿಂದೆ ತಮ್ಮ ಮನೆಯ ದುರಸ್ತಿ ಕೆಲಸ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಪಿಡಬ್ಲೂಡಿ ಅಧಿಕಾರಿಯೊಬ್ಬರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಇದೇ ನ್ಯಾಯಾಧೀಶರು ಆದೇಶಿಸಿದ್ದರು ಎಂಬ ವಿಶಯವು ವಿಚಾರಣೆ ವೇಳೆ ನ್ಯಾಯಪೀಠದ ಗಮನಕ್ಕೆ ಬಂದಿತು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅವರು ನ್ಯಾಯಾಲಯವನ್ನು ತಮ್ಮ ವೈಯಕ್ತಿಕ ಆಸ್ತಿ ಎಂದುಕೊಂಡಿದ್ದಾರೆ ಎಂದು ಟೀಕಿಸಿತು.