- ವ್ಯವಸ್ಥೆಯ ದುರುಪಯೋಗ ಎಂದ ಹೈಕೋರ್ಟ್
- ನಾಲ್ವರ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು: ಎರಡು ಹಸುಗಳು ಕಾಣೆಯಾಗಿ ಸುಮಾರು ಎರಡು ವರ್ಷಗಳ ನಂತರ ನೀಡಿದ ದೂರು ಆಧರಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದ ಪೊಲೀಸರ ವರ್ತನೆಯನ್ನು ಖಂಡಿಸಿರುವ ಹೈಕೋರ್ಟ್, ಇದು ಕ್ರಿಮಿನಲ್ ನ್ಯಾಯವ್ಯವಸ್ಥೆಯ ದುರುಪಯೋಗಕ್ಕೆ ಸ್ಪಷ್ಟ ಉದಾಹರಣೆ ಎಂದಿದೆ.
ಚನ್ನಪಟ್ಟಣ ತಾಲೂಕಿನ ಎಂ.ಕೆ. ದೊಡ್ಡಿ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಕೋರಿ ತೌಟನಹಳ್ಳಿಯ ಮಂಗಳಮ್ಮ, ಚೇತನ್, ಸೌಮ್ಯಾ ಮತ್ತು ಚಂದನ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸುವ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.
2024ರ ಆಗಸ್ಟ್ನಲ್ಲಿ ಮೆಯಲು ಹೋಗಿದ್ದ ಹಸು ಹಿಂದಿರುಗಿಲ್ಲ ಎಂದು ಎರಡು ವರ್ಷದ ನಂತರ ಎಂ.ಕೆ. ದೊಡ್ಡಿಯ ಪ್ರಸಾದ್ ಎಂಬುವರು ದೂರು ನೀಡಿದ್ದಾರೆ. ಇದು ಕ್ರಿಮಿನಲ್ ನ್ಯಾಯವ್ಯವಸ್ಥೆಯ ದುರುಪಯೋಗವಾಗಿದ್ದು, ಅದಕ್ಕೆ ಪೊಲೀಸರು ಬೆಂಬಲಿಸಿದ್ದಾರೆ. ಅತಿಯಾದ ವಿಳಂಬದ ನಂತರ ದೂರು ದಾಖಲಾದಾಗ ಯಾವುದೇ ಪ್ರಾಥಮಿಕ ತನಿಖೆ ನಡೆಸದೆ ನೇರವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರ್ಜಿದಾರರಿಗೆ ನೋಟಿಸ್ ನೀಡಿದ್ದಾರೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಪೊಲೀಸರ ವರ್ತನೆ ಹೇಗಿದೆಯೆಂದರೆ ಯಾರಾದರೂ ಕೊಲೆಯಾಗಿದೆ ಎಂದು ದೂರು ನೀಡಿದರೆ ಇರಿ, ನಾವು ಹಸು ಹುಡುಕುತ್ತಿದ್ದೇವೆ ಎಂದು ಹೇಳುವಂತಿದೆ. ಪ್ರಾಣಿಗಳನ್ನು ಹುಡುಕಬಾರದು ಎಂದು ಹೇಳುತ್ತಿಲ್ಲ. ಆದರೆ, ಇಷ್ಟು ವಿಳಂಬದ ನಂತರ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದನ್ನು ಒಪ್ಪಲಾಗದು ಎಂದು ಅಭಿಪ್ರಾಯಪಟ್ಟು ಪ್ರಕರಣ ರದ್ದುಗೊಳಿಸಿತು. ದೂರುದಾರರು ಸಿವಿಲ್ ನ್ಯಾಯಾಲಯದ ಮೂಲಕ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಈ ವೇಳೆ ತಿಳಿಸಿತು.