High court 
ರಾಜ್ಯ

ರಸ್ತೆ ವಿಸ್ತರಣೆಗೆ ಉಚಿತವಾಗಿ ಜಮೀನು ಕೇಳುವಂತಿಲ್ಲ| High court

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಬೇಡಿಕೆ ರದ್ದುಪಡಿಸಿದ ಹೈಕೋರ್ಟ್
  • ಕಾನೂನು ಪಾಲಿಸುವಂತೆ ನ್ಯಾಯಾಲಯದ ನಿರ್ದೇಶನ
ಬೆಂಗಳೂರು: ರಸ್ತೆ ಅಗಲೀಕರಣದ ಉದ್ದೇಶಕ್ಕಾಗಿ ಖಾಸಗಿ ಜಮೀನು ಮಾಲೀಕರು ಉಚಿತವಾಗಿ ಜಾಗ ಬಿಟ್ಟುಕೊಡಬೇಕು ಎಂದು ಬಲವಂತಪಡಿಸುವ ಯಾವುದೇ ಕಾನೂನುಬದ್ಧ ಅಧಿಕಾರ ಬೃಹತ್​ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಇಲ್ಲ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.
ಕಟ್ಟಡ ನಿಮಾರ್ಣದ ಪರಿಷ್ಕೃತ ನಕ್ಷೆ ಮಂಜೂರಾತಿ ಮಾಡಬೇಕಾದರೆ ಜಿಬಿಎಗೆ ಅಗತ್ಯವಾಗಿರುವ ಜಾಗವನ್ನು ಬಿಟ್ಟುಕೊಟ್ಟು ಹಕ್ಕುತ್ಯಾಗ ಪತ್ರ ಬರೆದುಕೊಡುವಂತೆ ತಲಘಟ್ಟಪುರ ನಿವಾಸಿ ಎಂ. ಶಶಿಕುಮಾರ್​ ಎಂಬುವರಲ್ಲಿ ಜಿಬಿಎ ಇಟ್ಟಿದ್ದ ಬೇಡಿಕೆಯನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ತೀರ್ಪು ನೀಡಿದೆ.
ಅರ್ಜಿದಾರರಾದ ಶಶಿಕುಮಾರ್​ ಅವರು ಕನಕಪುರ ರಸ್ತೆಯ ತಲಘಟ್ಟಪುರ ಗ್ರಾಮದಲ್ಲಿ 2.4 ಎಕರೆ ವಸತಿ ಪರಿವರ್ತಿತ ಜಮೀನು ಹೊಂದಿದ್ದಾರೆ. ಈ ಜಮೀನಿನಲ್ಲಿ ಬೃಹತ್​ ವಸತಿ ಸಮುಚ್ಚಯ ನಿರ್ಮಾಣಕ್ಕಾಗಿ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಟ್ಟಿದ್ದರು. ಅರ್ಜಿದಾರರು ಪಾಲಿಕೆಗೆ ಪಾವತಿಸಬೇಕಾದ ನಕ್ಷೆ ಮಂಜೂರಾತಿ ಮತ್ತಿತರ ಶುಲ್ಕಗಳನ್ನು ಪಾವತಿಸಿ ಅಗತ್ಯ ನಿರಾಕ್ಷೇಪಣಾ ಪತ್ರಗಳನ್ನು ಪಡೆದುಕೊಂಡಿದ್ದರು. 
ಆದರೆ, ಕನಕಪುರ ಮುಖ್ಯರಸ್ತೆಯನ್ನು 31 ಮೀಟರ್​ನಿಂದ 45 ಮೀಟರ್​ಗೆ ಅಗಲೀಕರಣ ಮಾಡಲು ಅರ್ಜಿದಾರರ ಜಮೀನಿನಲ್ಲಿ 381.70 ಚದರ ಮೀಟರ್​ ಜಾಗವನ್ನು ಉಚಿತವಾಗಿ ಬಿಟ್ಟುಕೊಡಬೇಕು ಮತ್ತು ಅದಕ್ಕಾಗಿ ಹಕ್ಕುತ್ಯಾಗ ಪತ್ರ ನೋಂದಣಿ ಮಾಡಿಕೊಡಬೇಕು ಎಂದು ಷರತ್ತು ವಿಧಿಸಿದ ಪಾಲಿಕೆಯು ಅರ್ಜಿದಾರರಿಗೆ ನೆ ಮಂಜೂರು ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. 

ಪಾಲಿಕೆ ವಾದವೇನು?:

ಜಿಬಿಎ ಪರ ವಾದಿಸಿದ ವಕೀಲರು, ರಸ್ತೆ ಅಗಲೀಕರಣದಿಂದ ಅರ್ಜಿದಾರರ ವಸತಿ ಸಮುಚ್ಚಯಕ್ಕೆ ಉತ್ತಮ ರಸ್ತೆ ಸಂಪರ್ಕ ಸಿಗಲಿದ್ದು, ಆಸ್ತಿಯ ಮೌಲ್ಯ ಹೆಚ್ಚಾಗುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಉಚಿತವಾಗಿ ಜಾಗ ಪಡೆಯುವ ಪಾಲಿಕೆಯ ಬೇಡಿಕೆಯಲ್ಲಿ ತಪ್ಪಿಲ್ಲ ಎಂದು ವಾದಿಸಿದ್ದರು. 
⚠️

ಅಗತ್ಯವಿದ್ದರೆ ಭೂಸ್ವಾಧಿನ ನಡೆಸಿ 

ಪಾಲಿಕೆಯ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ರಸ್ತೆ ವಿಸ್ತರಣೆಯಂತಹ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಖಾಸಗಿ ಜಮೀನು ಭೂಮಿ ಬೇಕಿದ್ದರೆ ಕಾನೂನುಬದ್ಧವಾಗಿ ಭೂಸ್ವಾಧಿನ ಪ್ರಕ್ರಿಯೆ ನಡೆಸಿ ಪರಿಹಾರ ನೀಡಬೇಕು. ಅದರ ಬದಲಾಗಿ ಕಟ್ಟಡ ನಕ್ಷೆ ಮಂಜೂರಾತಿಯನ್ನು ಅಸ್ತ್ರವಾಗಿ ಬಳಸಿ ಜಮೀನಿನ ಹಕ್ಕನ್ನು ಮಾಲೀಕರಿಂದ ಕಸಿಯುವಂತಿಲ್ಲ ಎಂದು ಭೂಮಿ ಕಸಿಯುವಂತಿಲ್ಲ. ಯಾವುದೇ ಷರತ್ತು ವಿಧಿಸದೆ ಮುಂದಿನ 30 ದಿನಗಳಲ್ಲಿ ಅರ್ಜಿದಾರರಿಗೆ ನೆ ಮಂಜೂರಾತಿ ನೀಡಬೇಕು ಎಂದು ಆದೇಶಿಸಿದೆ.