ದಾವಣಗೆರೆ ದಂಗಲ್: ಅಧಿಕಾರ ಹೋಗುವ ಭೀತಿ, ರಾತ್ರೋರಾತ್ರಿ ಸಿಎಂ ನಿವಾಸಕ್ಕೆ ದೌಡಾಯಿಸಿದ ಜಮೀರ್! CM Siddaramaiah  
ರಾಜ್ಯ

ದಾವಣಗೆರೆ ದಂಗಲ್: ಅಧಿಕಾರ ಹೋಗುವ ಭೀತಿಯಲ್ಲಿ ರಾತ್ರೋರಾತ್ರಿ ಸಿಎಂ ಭೇಟಿಯಾದ ಸಚಿವ ಜಮೀರ್! CM Siddaramaiah

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆ ಉಪಚುನಾವಣೆ ಕಾಂಗ್ರೆಸ್ ಪಕ್ಷದ ಒಳಗೆ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿ ಮಾಡಿದೆ
  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರ ಪದಚ್ಯುತಿಯ
  • ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದ ಜಮೀರ್ ಅಹ್ಮದ್ ಖಾನ್ ಹಾಗೂ ಮುಖ್ಯಮಂತ್ರಿಗಳ ಭೇಟಿ
  • ಇಬ್ಬರ ತಲೆದಂಡ ಬೆನ್ನಲ್ಲೇ ತಮ್ಮ ಮೇಲೂ ಶಿಸ್ತು ಕ್ರಮ ಜರುಗಬಹುದು ಎಂಬ ಭೀತಿಯಲ್ಲಿ ಸಚಿವ ಜಮೀರ್ ಅಹ್ಮದ್
CM Siddaramaiah : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಪಕ್ಷದ ಒಳಗೆ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರ ಪದಚ್ಯುತಿಯ ಬೆನ್ನಲ್ಲೇ, ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಕೆಲಸ ಮಾಡದೆ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ ನಸೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಲಾಗಿದೆ. ಈ ಮೂಲಕ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದವರಿಗೆ ಕಾಂಗ್ರೆಸ್​ ಖಡಕ್​ ಎಚ್ಚರಿಕೆ ನೀಡಿದೆ.
ಎಐಸಿಸಿ ವೀಕ್ಷಕ ಅಭಿಷೇಕ್ ದತ್ ನೀಡಿದ ವರದಿಯಲ್ಲಿ ನಸೀರ್ ಅಹ್ಮದ್, ಅಬ್ದುಲ್ ಜಬ್ಬಾರ್ ಮತ್ತು ಜಮೀರ್ ಅಹ್ಮದ್ ಅವರ ಹೆಸರು ಪ್ರಸ್ತಾಪವಾಗಿತ್ತು. ಈ ಮೂವರು ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇತ್ತು. ಆದರೆ, ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದ್ದರಿಂದ ಮುಸ್ಲಿಂ ನಾಯಕರು ಅಸಮಾಧಾನಗೊಂಡು ಪ್ರಚಾರದಿಂದ ದೂರ ಉಳಿದಿದ್ದರು ಎನ್ನಲಾಗಿದೆ. ಅಲ್ಲದೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎನ್ನಲಾಗಿದೆ. 

ಸಿಎಂ ಭೇಟಿ ಮಾಡಿದ ಜಮೀರ್ ಅಹ್ಮದ್

ನಸೀರ್ ಅಹ್ಮದ್ ಹಾಗೂ ಅಬ್ದುಲ್ ಜಬ್ಬಾರ್ ಅವರ ತಲೆದಂಡದ ಬೆನ್ನಲ್ಲೇ ತಮ್ಮ ಮೇಲೂ ಶಿಸ್ತು ಕ್ರಮ ಜರುಗಬಹುದು ಎಂಬ ಭೀತಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಮಂಗಳವಾರ (ಏಪ್ರಿಲ್ 14) ರಾತ್ರಿ ಸಿಎಂ ಸಿದ್ದರಾಮಯ್ಯ ಅವರನ್ನು ಅವರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು. ನಾನು ಪಕ್ಷ ವಿರೋಧ ಚಟುವಟಿಕೆ ನಡೆಸಿಲ್ಲ ಎಂದು ಜಮೀರ್​ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ವರದಿಯಲ್ಲಿ ಜಮೀರ್ ಅವರ ಹೆಸರು ಇರುವುದರಿಂದ ಅವರ ಮೇಲೂ ಶಿಸ್ತು ಕ್ರಮ ಜರುಗಬಹುದು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಸಿಎಂ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. 

ಸಿಎಂ ತರಾಟೆ

ನಿನ್ನೆ ಭೇಟಿಯ ವೇಳೆ ಜಮೀರ್ ಅಹ್ಮದ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರ ಬಳಿ ಇರುವ ಎರಡು ಪ್ರಮುಖ ಖಾತೆಗಳಲ್ಲಿ ಒಂದನ್ನು ಹಿಂಪಡೆಯುವ ಮೂಲಕ ಶಾಕ್​ ನೀಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ತಾವು ದಾವಣಗೆರೆ ಪ್ರಚಾರಕ್ಕೆ ಹೋಗಲು ಸಾಧ್ಯವಾಗದಿರಲು ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದ ಜವಾಬ್ದಾರಿ ಇದ್ದಿದ್ದೇ ಕಾರಣ ಎಂದು ಅವರು ಸಿಎಂಗೆ ಮನವರಿಕೆ ಮಾಡಲು ಜಮೀರ್​ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಒಳಗೆ ಭುಗಿಲೆದ್ದ ಅಸಮಾಧಾನ

ಈ ಉಪಚುನಾವಣೆಯು ಕಾಂಗ್ರೆಸ್‌ನ ಅಲ್ಪಸಂಖ್ಯಾತ ನಾಯಕರ ನಡುವೆ ಎರಡು ಬಣಗಳನ್ನು ಸೃಷ್ಟಿಸಿದೆ.  ಜಮೀರ್ ಅಹ್ಮದ್, ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ (ಇವರು ಈಗಾಗಲೇ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ) ಒಂದು ಬಣವಾದರೆ, ಎಂಎಲ್‌ಸಿ ಸಲೀಂ ಅಹ್ಮದ್ ಮತ್ತು ಶಾಸಕ ರಿಜ್ವಾನ್ ಅರ್ಷದ್ ಮತ್ತೊಂದು ಬಣವಾಗಿದೆ. ಸದ್ಯ ಇಬ್ಬರ ತಲೆದಂಡವಾಗಿದ್ದು, ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಒಂದು ವೇಳೆ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಏನಾದರೂ ಸೋತರೆ ಜಮೀರ್​ ಮೇಲೆ ಕ್ರಮ ಜರಗಿಸುವ ಸಾಧ್ಯತೆ ಇದೆ.