ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ ಬೇಸ್​ಮೆಂಟ್​ನೊಂದಿಗೆ ಶೆಡ್​ ಹಾಕಿ ಬಿಟ್ಟಿರುವ ಮಹಿಳಾ ಹೈಟೆಕ್​ ಶೌಚಗೃಹ. 
ರಾಜ್ಯ

ಹೈಟೆಕ್​ ಶೌಚಗೃಹ ಕಾಮಗಾರಿಗೆ ಗ್ರಹಣ

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರದಲ್ಲಿ ಕೋಟ್ಯಂತರ ರೂ. ಅನುದಾನ ಪೋಲು
  • ಪ್ರಿಯಾಂಕ್​ ಕನಸಿನ ಯೋಜನೆಗೆ ನಿರ್ಲಕ್ಷ
ಶಿವರಾಜ ವಾಲಿ ಚಿಂಚೋಳಿ:
ಬಯಲು ಶೌಚಮುಕ್ತ ಕಲಬುರಗಿ ನಿರ್ಮಾಣ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ಖರ್ಗೆ ಅವರು ಹೈಟೆಕ್​ ಮಹಿಳಾ ಶೌಚಗೃಹ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕ್ಷೇತ್ರದಲ್ಲಿ ಯೋಜನೆ ಈವರೆಗೂ ಸಮರ್ಪಕವಾಗಿ ಜಾರಿಯಾಗಿಲ್ಲ.
2023-24ನೇ ಸಾಲಿನಲ್ಲಿ ಕ್ಷೇತ್ರಕ್ಕೆ 10 ಹೈಟೆಕ್​ ಶೌಚಗೃಹ ಮಂಜೂರು ಮಾಡಿದ್ದು, ಇದಕ್ಕಾಗಿ 2.50 ಕೋಟಿ ರೂ. ಅನುದಾನ ನೀಡಲಾಗಿದೆ. ಒಂದಕ್ಕೆ 25 ಲಕ್ಷ ರೂ. ನಿಗದಿ ಪಡಿಸಲಾಗಿದೆ. ಚಂದನಕೇರಾ, ಚಿಮ್ಮನಚೋಡ, ಸಾಲೇಬೀರನಳ್ಳಿ, ಐನಾಪುರ, ಅಣವಾರ, ಗಾರಂಪಳ್ಳಿ, ಕೊಡದೂರ, ಗೋಟೂರ, ಶಾದಿಪುರ, ವೆಂಕಟಾಪುರ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ನಿರ್ಮಾಣದ ಜವಾಬ್ದಾರಿಯನ್ನು ಭೂ ಸೇನಾ ನಿಗಮಕ್ಕೆ ನೀಡಲಾಗಿದೆ.
ಅನುದಾನ ಬಿಡುಗೆಯಾಗಿ ಎರಡು ವರ್ಷವಾದ್ರೂ ಒಂದು ಕಡೆಯೂ ಕಾಮಗಾರಿ ಪೂರ್ಣವಾಗಿಲ್ಲ. 7 ಗ್ರಾಮಗಳಲ್ಲಿ ಬೇಸ್​ಮೆಂಟ್​, ಮೇಲೊಂದು ಪತ್ರಾ ಶೆಡ್​ ಹಾಕಿ ಬಿಡಲಾಗಿದೆ. ಆದರೆ ಗೋಟೂರ, ಶಾದಿಪುರ, ವೆಂಕಟಾಪುರ ಗ್ರಾಮದಲ್ಲಿ ಕಾಮಗಾರಿ ಪ್ರಾರಂಭಿಸಿಲ್ಲ. 6 ತಿಂಗಳಲ್ಲಿ ಕಾಮಗಾರಿ ಮುಗಿಯಬೇಕು ಎಂಬ ನಿಯಮವಿದ್ದು, ಇದ್ಯಾವುದು ಲೆಕ್ಕಕ್ಕಿಲ್ಲದಂತಾಗಿದೆ. ಎರಡು ವರ್ಷ ಕಳೆಯುತ್ತಾ ಬಂದರೂ ಕೆಲಸ ಪೂರ್ಣವಾಗಿಲ್ಲ.
ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಕೆಲಸ ಮಾಡದೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಮಹತ್ವಾಕಾಂಕ್ಷಿಯ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಯವಾಗಿದೆ.

ಶೆಡ್​ ಬಿಟ್ರೆ ಬೇರೇನೂ ಇಲ್ಲ

ಒಂದು ಶೌಚಗೃಹಕ್ಕೆ 25 ಲಕ್ಷ ರೂ. ಮೀಸಲಿಟ್ಟಿದ್ದು, 10 ಟಾಯ್ಲೆಟ್​, ಸೆಫ್ಟಿಕ್​ ಟ್ಯಾಂಕ್​, ನೀರು, ವಿದ್ಯುತ್​ ವ್ಯವಸ್ಥೆ ಸೇರಿ ಹೈಟೆಕ್​ ಸೌಕರ್ಯ ಕಲ್ಪಿಸಬೇಕು ಎಂಬ ನಿಯಮವಿದೆ. ಆದರೆ ಗುತ್ತಿಗೆದಾರರು ಬೇಸ್​ಮೆಂಟ್​ ಮಾಡಿ, ಮೆಲೊಂದು ಶೆಡ್​ ಹಾಕಿ ಬಿಟ್ಟಿದ್ದಾರೆ. ಒಳಗಡೆ ಟಾಯ್ಲೆಟ್​ಗಳಿಲ್ಲ, ನೀರಿನ ವ್ಯವಸ್ಥೆ ಮಾಡಿಲ್ಲ, ವಿದ್ಯುತ್​ ಸಂಪರ್ಕ ಕಲ್ಪಿಸಿಲ್ಲ. ಕಾಟಾಚಾರಕ್ಕೆ ಶೌಚಗೃಹ ನಿರ್ಮಿಸಿ ಕೈತೊಳೆದುಕೊಂಡಿದ್ದಾರೆ.
"

ಹೈಟೆಕ್​ ಶೌಚಗೃಹ ಕಾಮಗಾರಿ ಭೂ ಸೇನಾ ನಿಗಮದಿಂದ ನಡೆಯುತ್ತಿದ್ದು, ಈವರೆಗೂ ಯಾವೊಂದು ಕಾಮಗಾರಿ ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಗೊಳಿಸಿಲ್ಲ.

— > ಸಂತೋಷಕುಮಾರ ಚವ್ಹಾಣ್​, ಇಒ, ತಾಲೂಕು ಪಂಚಾಯಿತಿ, ಚಿಂಚೋಳಿ

"

ಚಂದನಕೇರಾ, ಚಿಮ್ಮನಚೋಡ, ಸಾಲೇಬೀರನಳ್ಳಿ, ಐನಾಪುರ, ಅಣವಾರ, ಗಾರಂಪಳ್ಳಿ, ಕೊಡದೂರ ಗ್ರಾಮಗಳಲ್ಲಿ ಕೆಲಸ ನಡೆಯುತ್ತಿದೆ. ಗೋಟೂರ, ಶಾದಿಪುರ, ವೆಂಕಟಾಪುರದಲ್ಲಿ ಸ್ಥಳ ಸಮಸ್ಯೆಯಿಂದ ಇನ್ನು ಕಾಮಗಾರಿ ಶುರುವಾಗಿಲ್ಲ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು.

— > ನಾಗನಾಥ ಮೊಕಟೆ, ಸಹಾಯಕ ಅಭಿಯಂತ, ಭೂ ಸೇನಾ ನಿಗಮ, ಚಿಂಚೋಳಿ