Heroic stone inscribed with Ganga era discovered
ಶಿಡ್ಲಘಟ್ಟ: ಕೆ.ಮುತ್ತುಗದಹಳ್ಳಿಯಲ್ಲಿ ಗಂಗರ ಕಾಲದ ಕ್ರಿ.ಶ.890ರ ಶಾಸನೋಕ್ತ ವೀರಗಲ್ಲನ್ನು ಶಾಸನ ತರಾದ ಕೆ.ಧನಪಾಲ್ ಮತ್ತು ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್ ಗ್ರಾಮಸ್ಥರ ನೆರವಿನಿಂದ ಪತ್ತೆ ಹಚ್ಚಿ ಅದರಲ್ಲಿರುವ ಹಳಗನ್ನಡದ ಪಠ್ಯ ಓದಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಈವರೆಗೂ ಸಿಕ್ಕಿರುವ ಗಂಗರ 10 ಶಿಲಾಶಾಸನಗಳ ಪೈಕಿ ಇದೂ ಒಂದಾಗಿದೆ. ಇದರಲ್ಲಿ ಗಂಗರ ವಿರುದ್ಧ ನೊಳಂಬರ ಮಹೇಂದ್ರ ನಡೆಸಿದ್ದ ಕಾಳಗದಲ್ಲಿ ಮುತ್ತುಗದಹಳ್ಳಿ ಪ್ರದೇಶದ ಚೊರಟೂರಿನ ಅತ್ತನ್ನ ಎಂಬ ವೀರನೊಬ್ಬ ಭಾಗವಹಿಸಿ ವೀರಮರಣ ಹೊಂದಿರುವ ಮಾಹಿತಿ, ವೀರನ ಮೈತುಂಬ ಬಾಣಗಳು ಹೊಕ್ಕಿರುವ ಶಿಲ್ಪ ಕೆತ್ತಲಾಗಿದೆ.
ಗಂಗರು ನಾಲ್ಕನೇ ಶತಮಾನದಲ್ಲಿ ನಂದಿಗಿರಿನಾಥ ಎಂಬ ಬಿರುದನ್ನು ಧರಿಸಿದ್ದ ಬಾಣರನ್ನು ಸೋಲಿಸಿ ನಂದಿಯನ್ನು ಗಿರಿದುರ್ಗವನ್ನಾಗಿಸಿಕೊಂಡು, ಕುವಳಾಲವನ್ನು(ಕೋಲಾರ) ತಮ್ಮ ರಾಜಧಾನಿಯಾಗಿಸಿಕೊಂಡು ರಾಜ್ಯಾಡಳಿತ ಆರಂಭಿಸಿದರು. 3 ತಲೆಮಾರಿನ ನಂತರ ಅವರು ರಾಜಧಾನಿಯನ್ನು ತಲಕಾಡಿಗೆ ವರ್ಗಾಯಿಸಿಕೊಂಡರೂ ಗಂಗಾರುಸಾಸಿರದ ಭಾಗವಾದ ಚಿಕ್ಕಬಳ್ಳಾಪುರ ಪ್ರದೇಶವನ್ನು ಅಧೀನದಲ್ಲೇ ಇಟ್ಟುಕೊಂಡಿದ್ದರು. ಇತ್ತ ಚಿಕ್ಕಬಳ್ಳಾಪುರ ಪ್ರದೇಶ ಕಳೆದುಕೊಂಡ ಬಾಣರು ಆಗಿಂದಾಗ್ಗೆ ಮರಳಿ ತಮ್ಮ ರಾಜ್ಯ ಪಡೆಯಲು ಗಂಗರ ಮೇಲೆ ಯುದ್ಧಕ್ಕೆ ಬರುತ್ತಲೇ ಇದ್ದರು. ಈ ಕಿರಿಕಿರಿ ತಪ್ಪಿಸಿಕೊಳ್ಳಲು 9ನೇ ಶತಮಾನದಲ್ಲಿ ಗಂಗರು ಚಿಕ್ಕಬಳ್ಳಾಪುರ ಪ್ರದೇಶವನ್ನು ನೊಳಂಬರಿಗೆ ಬಿಟ್ಟುಕೊಡುತ್ತಾರೆ. ಹಾಗಾಗಿ ಚಿಕ್ಕಬಳ್ಳಾಪುರ ಪ್ರದೇಶದಲ್ಲಿ ಗಂಗರ ಶಾಸನಗಳು 8ನೇ ಶತಮಾನದವರೆಗೆ ಮಾತ್ರ ಸಿಗುತ್ತವೆ.
> ಡಿ.ಎನ್.ಸುದರ್ಶನರೆಡ್ಡಿ, ಶಾಸನತ,
ಕೋಚಿಮುಲ್ ಮಾಜಿ ನಿರ್ದೇಶಕ ಕೆ.ಮುತ್ತುಗದಹಳ್ಳಿಯ ಆರ್.ಶ್ರೀನಿವಾಸ್ ಮಾತನಾಡಿ, ನಾವು ಚಿಕ್ಕಂದಿನಲ್ಲಿ ಈ ಕಲ್ಲನ್ನು ನೋಡಿದ್ದೆವು. ಇತ್ತೀಚೆಗೆ ಮಣ್ಣಲ್ಲಿ ಸೇರಿದ್ದ ಇದನ್ನು ಪತ್ತೆ ಮಾಡಿದೆವು. ಅದರ ಮೇಲಿನ ಹಳಗನ್ನಡದ ಲಿಪಿಯನ್ನು ಶಾಸನತರು ಓದಿ ಹೇಳಿದ್ದಾರೆ. ನಮ್ಮ ಗ್ರಾಮಕ್ಕೆ ಸೇರಿರುವ ವೀರನ ಶೌರ್ಯಗಾಥೆ ತಿಳಿಸುವ ಈ ಕಲ್ಲನ್ನು ಹಳ್ಳಿಯ ಭಜನೆಮನೆಯ ಬಳಿ ಸ್ಥಾಪಿಸುತ್ತೇವೆ. ಇದರ ಮೇಲೆ ಬರೆದಿರುವ ವಿಷಯವುಳ್ಳ ಫಲಕವನ್ನು ಶಾಸನತ ಕೆ.ಧನಪಾಲ್ ಮಾಡಿಸಿಕೊಡುವುದಾಗಿ ಹೇಳಿದ್ದಾರೆ ಎಂದು ಹೇಳಿದರು.
ಕೆ.ಮುತ್ತುಗದಹಳ್ಳಿಯ ಆರ್.ಶ್ರೀನಿವಾಸ್, ಮುನಿನಾರಾಯಣಪ್ಪ, ನಾರಾಯಣಸ್ವಾಮಿ, ವೆಂಕಟೇಶ್, ನಾಗರಾಜ್, ಶ್ರೀರಾಮ್, ಸಂಜೀವಪ್ಪ, ಮಂಜುನಾಥ್, ಸಂಶೋಧನಾ ವಿದ್ಯಾರ್ಥಿ ಅಶ್ವಿನಿ ಇದ್ದರು.