ನೂತನವಾಗಿ ಬಿಡುಗಡೆಗೊಂಡಿರುವ ಹೀರೋ ಮೋಟೊಕಾರ್ಪ್ ಪ್ರೀಮಿಯಂ ಬೈಕ್‌ಗಳು 
ರಾಜ್ಯ

ಹೀರೋ ಮೋಟೊಕಾರ್ಪ್ ಪ್ರೀಮಿಯಂ ಬೈಕ್ ಮಾರುಕಟ್ಟೆಗೆ

ಎಕ್ಸ್‌ಟ್ರೀಮ್ 160 ಆರ್ 4ವಿ, 250ಆರ್ ನವೀಕೃತ ಮಾದರಿ

ಬೆಂಗಳೂರು : ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಪ್ರೀಮಿಯಂ ಬೈಕ್ ಮಾರುಕಟ್ಟೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹೊಸ ಎಕ್ಸ್‌ಟ್ರೀಮ್ 160ಆರ್ 4ವಿ ಮತ್ತು ನವೀಕೃತ ಎಕ್ಸ್‌ಟ್ರೀಮ್ 250 ಆರ್ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ, ಉತ್ತಮ ಕಾರ್ಯಕ್ಷಮತೆ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಆದ್ಯತೆ ನೀಡಿರುವ ಈ ಬೈಕ್‌ಗಳು ಯುವ ಸವಾರರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.

ಹೊಸ ಎಕ್ಸ್‌ಟ್ರೀಮ್ 160 ಆರ್ 4ವಿ ಬೈಕ್‌ನಲ್ಲಿ 163 ಸಿಸಿ, ನಾಲ್ಕು ವಾಲ್ವ್‌ಗಳ ಆಯಿಲ್ ಕೂಲ್ ಎಂಜಿನ್ ಅಳವಡಿಸಲಾಗಿದೆ. ಇದು 17.1 ಪಿಎಸ್ ಗರಿಷ್ಠ ಶಕ್ತಿ ಮತ್ತು 14.6 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 4.4 ಸೆಕೆಂಡ್​ಗಳಲ್ಲಿ 60 ಕಿ.ಮೀ. ವೇಗದ ಪಿಕಪ್ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ರೈಡರ್‌ಗಳ ಅನುಕೂಲಕ್ಕಾಗಿ ರೈಡ್ ಬೈ ವೈರ್ ತಂತ್ರಜ್ಞಾನ, ರೈನ್, ರೋಡ್ ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳು ಹಾಗೂ ಈ ವಿಭಾಗದಲ್ಲೇ ಮೊದಲ ಬಾರಿಗೆ ಕ್ರೂಸ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

ಸುರಕ್ಷತೆಗೆ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ತುರ್ತು ಬ್ರೇಕಿಂಗ್ ಸಂದರ್ಭದಲ್ಲಿ ಇತರ ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಪ್ಯಾನಿಕ್ ಬ್ರೇಕ್ ಅಲರ್ಟ್ ವ್ಯವಸ್ಥೆ ಅಳವಡಿಸಲಾಗಿದೆ. ಟಿಎಫ್‌ಟಿ ಡಿಸ್‌ಪ್ಲೇ, ಬ್ಲೂಟೂತ್ ಸಂಪರ್ಕ, ನೇವಿಗೇಷನ್ ಹಾಗೂ ಟೈಪ್-ಸಿ ಚಾರ್ಜಿಂಗ್ ಸೌಲಭ್ಯಗಳಿವೆ. ಅ.17ರಿಂದ ಬುಕ್ಕಿಂಗ್ ಆರಂಭವಾಗಿದ್ದು, ನ.1ರಿಂದ ವಿತರಣೆ ಪ್ರಾರಂಭವಾಗಲಿದೆ.

ಎಕ್ಸ್‌ಟ್ರೀಮ್ 250 ಆರ್ ವಿಶೇಷತೆ

ನವೀಕೃತ ಎಕ್ಸ್‌ಟ್ರೀಮ್ 250ಆರ್ ಬೈಕ್‌ನಲ್ಲಿ 250 ಸಿಸಿ ಲಿಕ್ವಿಡ್ ಕೂಲ್ ಎಂಜಿನ್ ಅಳವಡಿಸಲಾಗಿದ್ದು, 30 ಪಿಎಸ್ ಶಕ್ತಿ ಮತ್ತು 25.3 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರ್ಯಾಕ್ ಸೇರಿ ನಾಲ್ಕು ರೈಡಿಂಗ್ ಮೋಡ್‌ಗಳಿವೆ. ಕ್ರೂಸ್ ಕಂಟ್ರೋಲ್, ಕ್ವಿಕ್‌ಶಿಫ್ಟರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಹಾಗೂ ಫ್ರೀಕ್ವೆನ್ಸಿ ಸೆಲೆಕ್ಟಿವ್ ಡ್ಯಾಂಪಿಂಗ್ ಸಸ್ಪೆನ್ಷನ್ ಈ ಬೈಕ್‌ನ ಪ್ರಮುಖ ಆಕರ್ಷಣೆಗಳಾಗಿವೆ.