ಹೆಡಕನಹಳ್ಳಿ ಡೇರಿಯಲ್ಲಿ ಆಯೋಜಿಸಿದ್ದ ವಾರ್ಷಿಕ ಸಭೆಯನ್ನು ಬಮುಲ್ ಹೊಸಕೋಟೆ ಶಿಬಿರದ ಮಾರ್ಗ ವಿಸ್ತರಣಾಧಿಕಾರಿ ಟಿ.ಎಂ.ಆನಂದ್ ಉದ್ಘಾಟಿಸಿದರು. ಎಂಪಿಸಿಎಸ್ ಅಧ್ಯಕ್ಷ ಬಿಎನ್ಎಸ್ ಶ್ರೀನಿವಾಸ್, ಉಪಾಧ್ಯಕ್ಷೆ ಸಂಗೀತಾ, ಮಾಜಿ ಅಧ್ಯಕ್ಷರಾದ ಎಸ್.ಮಂಜುನಾಥ್, ಎನ್.ಚಂದ್ರಪ್ಪ, ಎಂ.ರಾಜಣ್ಣ, ಎಚ್.ಎಸ್.ನಾರಾಯಣಸ್ವಾಮಿ ಇತರರು ಇದ್ದರು.
ನಂದಗುಡಿ : ಕೃಷಿಕರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಹೈನೋದ್ಯಮ ಬೆಳವಣಿಗೆ ಕಾಣಲು ಸಾಧ್ಯ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಹೈನುಗಾರಿಕೆ ರೈತರಿಗೆ ವರದಾನ ಎಂದು ಬಮುಲ್ ಒಕ್ಕೂಟ ಹೊಸಕೋಟೆ ಶಿಬಿರದ ಮಾರ್ಗ ವಿಸ್ತರಣಾಧಿಕಾರಿ ಟಿ.ಎಂ.ಆನಂದ್ ಹೇಳಿದರು.
ಹೆಡಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಯೋಜಿಸಿದ್ದ 2025&26ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ರೈತರು ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಬದುಕಿನಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದು. ಆರ್ಥಿಕತೆಯಲ್ಲಿ ಸದೃಢತೆ ಸಾಧಿಸಲು ಹೈನುಗಾರಿಕೆ ಸಹಕಾರಿ. ಬಮುಲ್ನಿಂದ ರಿಯಾಯಿತಿ ದರದಲ್ಲಿ ಪ್ರೋಟಿನ್ಯುಕ್ತ ಪಶು ಆಹಾರ ಒದಗಿಸಲಾಗುತ್ತಿದೆ. ವಿಮೆ ಮಾಡಿಸುವುದರಿಂದ ಅಕಾಲಿಕ ಮರಣ ಹೊಂದಿದ ರಾಸುಗಳಿಗೆ ಹಣ ದೊರೆಯಲಿದೆ. ಅನಾರೋಗ್ಯಕ್ಕೆ ತುತ್ತಾದ ರೈತ ಕುಟುಂಬದ ಸದಸ್ಯರ ಶಸ್ತ್ರಚಿಕಿತ್ಸೆ ವೆಚ್ಚದಲ್ಲಿ 25 ಸಾವಿರ ರೂ.ಅನ್ನು ಬಮುಲ್ ಭರಿಸಲಿದೆ. ರೈತರು ರಾಸುಗಳಿಗೆ ಕಾಯಿಲೆ ಬಂದಾಗ ನುರಿತ ವೈದ್ಯರಿಂದ ಚಿಕಿತ್ಸೆ ನೀಡಿದರೆ ರೋಗಮುಕ್ತ ಹೊಂದಲು ಸಾಧ್ಯ ಎಂದರು.
2025&26ನೇ ಸಾಲಿನಲ್ಲಿ 11.91 ಲಕ್ಷ ರೂ. ವ್ಯಾಪಾರ ಲಾಭ ಗಳಿಸಿ, ಸಂಘಕ್ಕೆ 6.20 ಲಕ್ಷ ರೂ. ನಿವ್ವಳ ಲಾಭ ಬಂದಿದೆ. ಉತ್ಪಾದಕರಿಗೆ ಶೇ.1.89ರಷ್ಟು ಬೋನಸ್ ವಿತರಿಸಲಾಗುವುದು. ರಾಸುಗಳಿಗೆ ಪೌಷ್ಟಿಕಾಂಶ ಭರಿತ ಆಹಾರ ನೀಡುವುದಲ್ಲದೆ, ವೈಜ್ಞಾನಿಕ ಪದ್ಧತಿಯಲ್ಲಿ ಮೇವು ಬಳಕೆ, ಸ್ವಚ್ಛತೆಯಿಂದ ಕೆನೆಭರಿತ ಹಾಲು ಉತ್ಪಾದಿಸಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ರೈತರಾದ ಮಾಲಾ, ವೆಂಕಟೇಶ್, ಲಕ್ಷ$್ಮಮ್ಮ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಎಚ್.ಜಿ.ರಾಜೇಶ್, ಎಚ್.ಸಿ.ಮಂಜುನಾಥ್, ಎನ್.ಡಿ.ಬೈರೇಗೌಡ, ಎಚ್.ಸಿ.ಬೈರೇಗೌಡ, ಎಚ್.ವಿ.ಪ್ರಕಾಶ್, ಮುನಿರಾಜ, ವೆಂಕಟಲಕ್ಷ$್ಮಮ್ಮ, ಸುಜಾತಾ, ಶಾಮಲಮ್ಮ, ಬೈರೇಗೌಡ, ಮುಖಂಡರಾದ ಚಿನ್ನಯ್ಯಪ್ಪ, ವೆಂಕಟಶಾಮಿ, ಎಂ.ಮುನಿರಾಜು, ರಮೇಶ್, ಸಂಘದ ಮುಖ್ಯ ಕಾರ್ಯನಿರ್ವಾಹಕ ಎಚ್.ಎಸ್.ದಿವಾಕರ್, ಹಾಲು ಪರೀಕ್ಷಕ ಮಂಜುನಾಥ, ಸಹಾಯಕ ಬಾಲಕೃಷ್ಣ, ರೈತರು ಭಾಗವಹಿಸಿದ್ದರು.