ಬೆಂಗಳೂರಿನಲ್ಲಿ ಮಳೆ  
ರಾಜ್ಯ

ರಾಜಧಾನಿ ಹಲವೆಡೆ ಜಿಟಿಜಿಟಿ ಮಳೆ: ಜನಜೀವನ ಮೇಲೆ ಪರಿಣಾಮ-Bangalore rain

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಶನಿವಾರವೂ ನಗರದಲ್ಲೆಡೆ ಮಳೆಯಾಯಿತು. ಮಧ್ಯಾಹ್ನ ಮೋಡ ಕವಿದ ವಾತಾವರಣದೊಂದಿಗೆ ಜಿಟಿಜಿಟಿ ಮಳೆಯಾದರೆ, ಸಂಜೆ ಕೆಲ ಭಾಗಗಳಲ್ಲಿ ಜೋರಾಗಿ ಸುರಿಯಿತು.
ಹೇರೋಹಳ್ಳಿ 37, ಕೆಂಗೇರಿ 25, ಹಂಪೆನಗರ 20, ದೊಡ್ಡಬಿದ್ರೆಕಲ್ಲು 19, ಪೀಣ್ಯ ಕೈಗಾರಿಕಾ ಪ್ರದೇಶ 18, ಎಚ್.ಗೊಲ್ಲಹಳ್ಳಿ 17, ರಾಜರಾಜೇಶ್ವರಿನಗರ 16 ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣ 10 ಮಿಮೀ ಮಳೆಯಾಗಿತ್ತು. ಮೈಸೂರು ರಸ್ತೆ, ತುಮಕೂರು ರಸ್ತೆ, ಏರ್‌ಪೋರ್ಟ್ ರಸ್ತೆ, ವೈಟ್ ಫೀಲ್ಡ್, ಹೊಸೂರು ರಸ್ತೆ, ಕೆ.ಆರ್.ಪುರ ಸೇರಿ ನಗರದ ಬಹುತೇಕ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ರಜೆ ಹಿನ್ನೆಲೆಯಲ್ಲಿ ಊರಿಗೆ ತೆರಳಲು ದಾವಂತದಲ್ಲಿದ್ದವರಿಗೆ ತೊಂದರೆಗೆ ಸಿಲುಕಿದರು.
ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್. ಮಾರುಕಟ್ಟೆ, ಶಾಂತಿನಗರ, ಜಯನಗರ, ಜೆ.ಪಿ. ನಗರ, ಜೆ.ಸಿ. ನಗರ, ಬನಶಂಕರಿ, ವಿಜಯನಗರ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಸುಬ್ರಹ್ಮಣ್ಯನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ, ಬಸವನಗುಡಿ, ಶೇಷಾದ್ರಿಪುರದಲ್ಲಿ ಸಾಧಾರಣ ಪ್ರಮಾಣದ ವರ್ಷಧಾರೆಯಾಯಿತು. ನೀರಿನ ರಭಸಕ್ಕೆ ಕಾರು, ಬೈಕ್ ಸವಾರರು ತೊಂದರೆ ಅನುಭವಿಸಿದರು.
ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ವಾಹನ ಚಲಾಯಿಸಲು ಕೆಲಕಾಲ ಪರದಾಡಿದರು. ಸರಾಗವಾಗಿ ನೀರು ಹರಿಯುವ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು.ಅಂಡರ್‌ಪಾಸ್, ಜಂಕ್ಷನ್‌ಗಳಲ್ಲಿ ನೀರು ನಿಂತಿತ್ತು. ರಸ್ತೆ ಬದಿಗಳಲ್ಲಿ ಬೈಕ್ ನಿಲ್ಲಿಸಿ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟು ಮುಂಭಾಗ ಆಶ್ರಯ ಪಡೆದರು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಕಾಮಗಾರಿ ನಡೆಯುತ್ತಿದ್ದ ಸ್ಥಳಗಳಲ್ಲಿ ನೀರು ನಿಂತಿರುವುದು ಕಂಡುಬಂತು.
ರಾಜಧಾನಿಗೆ ಯೆಲ್ಲೋ ಅಲರ್ಟ್​​:
ನಗರದಲ್ಲಿ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಜೋರು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಜೂ 14ರಂದು ರಾಜಧಾನಿಗೆ ಹವಾಮಾನ ಇಲಾಖೆಗೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಕೆಲ ಪ್ರದೇಶಗಳಲ್ಲಿ ಗಂಟೆಗೆ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಜೂ 15ರಿಂದ ಮಧ್ಯಮ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಮೋಡ ಕವಿದ ವಾತಾವರಣ, ಮಳೆಯಿಂದ ಉಷ್ಣಾಂಶ ಇಳಿಮುಖವಾಗಿದೆ. ಗರಿಷ್ಠ, ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿ. ಸೆ. ಉಷ್ಣಾಂಶ ದಾಖಲಾಗಲಿದೆ.