ರಾಜ್ಯದ ಹಲವೆಡೆ ಮುಂದಿನ 7 ದಿನ ವರುಣಾರ್ಭಟ 
ರಾಜ್ಯ

ರಾಜ್ಯದಲ್ಲಿ 7 ದಿನ ಭರ್ಜರಿ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್-Orange alert

ಬೆಂಗಳೂರು: ಮುಂಗಾರು ಆಗಮನ ಬೆನ್ನಲ್ಲೇ ರಾಜ್ಯದ ಹಲವೆಡೆ ಮುಂದಿನ 7 ದಿನ ವರುಣಾರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಉತ್ತರ ಕನ್ನಡ ಸೇರಿ ಕರಾವಳಿ ಮತ್ತು ದಕ್ಷಿಣ ಕರ್ನಾಟಕದ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಶುಕ್ರವಾರ ಮಳೆಯಾಗಿತ್ತು.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 6ರಿಂದ ಜೂ 12ವರೆಗೆ ಬಿರುಸಾಗಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಇಲಾಖೆ, ಆರೆಂಜ್ ಅಲರ್ಟ್ ಕೊಟ್ಟಿದೆ. ಕರಾವಳಿ ವ್ಯಾಪ್ತಿಯಲ್ಲಿ ಪ್ರತಿ ಗಂಟೆಗೆ 60 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಕೆ ಎಚ್ಚರಿಕೆ ನೀಡಲಾಗಿದೆ.
ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಮುಂದಿನ 6 ದಿನ ಜೋರು ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಡಗಿನಲ್ಲಿ ಮುಂದಿನ 24 ಗಂಟೆ ಮತ್ತು ತುಮಕೂರಿನಲ್ಲಿ ಜೂ 7 ರಿಂದ ಮುಂದಿನ 2 ದಿನ ಯೆಲ್ಲೋ ಅಲರ್ಟ್ ಇರಲಿದೆ.
ಬೆಂಗಳೂರು ನಗರದಲ್ಲಿ ಮುಂದಿನ 2 ದಿನ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು 30 ಮತ್ತು 21 ಡಿ.ಸೆ. ದಾಖಲಾಗಬಹುದು. ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ.
ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಮಾರುತಗಳು ವ್ಯಾಪಿಸಿವೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಸೇರಿ ಉಳಿದ ಜಿಲ್ಲೆಗಳಲ್ಲಿ ಮಾನ್ಸೂನ್ ವ್ಯಾಪಿಸಲು ವಾತಾವರಣ ಅನುಕೂಲಕರವಾಗಿದೆ. ರಾಜ್ಯದಲ್ಲಿ ವಾರಪೂರ್ತಿ ಒಳ್ಳೆಯ ಮಳೆಯಾಗಲಿದೆ.
-ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.