ಹುಣಸೂರು ತಾಲೂಕಿನಾದ್ಯಂತ ಭಾನುವಾರ ಸುರಿದ ಭಾರಿ ಮಳೆಗೆ ಹಲವಾರು ಕಡೆಗಳಲ್ಲಿ ಮನೆಯ ಶೀಟ್‌ಗಳು ಹಾರಿಹೋಗಿವೆ.  
ರಾಜ್ಯ

ಭಾರಿ ಮಳೆಗೆ ತಂಬಾಕು, ಬಾಳೆ ನಾಶ

ಹುಣಸೂರು: ತಾಲೂಕಿನಾದ್ಯಂತ ಭಾನುವಾರ ಸಂಜೆ ಸುರಿದ ಮಳೆಗೆ ಹಲವಾರು ಮನೆಗಳು ಹಾನಿಗೊಳಗಾಗಿವೆ. ತಂಬಾಕು, ಬಾಳೆ ಬೆಳೆ ನಾಶವಾಗಿದೆ.
ಭಾನುವಾರ ಸಂಜೆ ತಾಲೂಕಿನಾದ್ಯಂತ ಬಿರುಗಾಳಿಯೊಂದಿಗೆ ಭರ್ಜರಿ ಮಳೆಯಾಗಿದೆ. ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ಮಳೆ ತಂಪರೆದರೂ ಗ್ರಾಮೀಣ ಭಾಗಗಳಲ್ಲಿ ಅವಾಂತರ ಸೃಷ್ಟಿಸಿದೆ. ತಾಲೂಕಿನ ಕೊತ್ತೇಗಾಲ ಗ್ರಾಮ ವ್ಯಾಪ್ತಿಯಲ್ಲಿ ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಕಟಾವಿನ ಹಂತದಲ್ಲಿದ್ದ ಹೊಗೆಸೊಪ್ಪು ಗಿಡಗಳು ನೀರಿನಲ್ಲಿ ತೇಲುತ್ತಿದ್ದವು. ತಾಲೂಕಿನ ಹನಗೋಡು ಹೋಬಳಿ ತಮ್ಮಡಹಳ್ಳಿ ಮತ್ತು ನಾಗನಹಳ್ಳಿಯಲ್ಲಿ ತಲಾ ಒಂದೊಂದು ಮನೆಯ ಛಾವಣಿ ಶೀಟ್‌ಗಳು ಹಾರಿಹೋಗಿವೆ. ಗಾವಡಗೆರೆ ಹೋಬಳಿ ಚಿಟ್ಟಕ್ಯಾತನಹಳ್ಳಿಯಲ್ಲಿ 12 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಅಲ್ಲದೇ ಹರವೆ ಗ್ರಾಮದಲ್ಲಿ 5-6 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆಗಿಡಗಳು ಬಿರುಗಾಳಿಗೆ ನೆಲಕ್ಕಚ್ಚಿವೆ. ತಾಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದ ಪರಿಣಾಮ ಸೋಮವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ತಾಲೂಕಿನಲ್ಲಿ ಭಾನುವಾರ ಸುರಿದ ಮಳೆಯಿಂದಾದ ಆಸ್ತಿಪಾಸ್ತಿ ಹಾನಿ ಮತ್ತು ಬೆಳೆ ನಾಶದ ಕುರಿತು ಆಯಾ ಹೋಬಳಿ ವ್ಯಾಪ್ತಿಯ ಕಂದಾಯಾಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ತಹಸೀಲ್ದಾರ್ ಜೆ.ಮಂಜುನಾಥ್ ವಿಜಯವಾಣಿಗೆ ತಿಳಿಸಿದ್ದಾರೆ.