ಕಕ್ಕೇರಾದಲ್ಲಿ ಬುಧವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಏದಲಭಾವಿ ಗ್ರಾಮದ ಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ವಾಹನ ಸಂಚಾರ ಕೆಲ ಹೊತ್ತು ಬಂದ್ ಆಯಿತು.
- ಭಾರಿ ಗುಡುಗು ಮಿಂಚಿಗೆ ಬೆಚ್ಚಿಬಿದ್ದ ಜನತೆ
- ಮಳೆ ನೀರಿನಿಂದ ಜಲಾವೃತವಾದ ಜಮೀನು
ಕಕ್ಕೇರಾ: ಪಟ್ಟಣದಲ್ಲಿ ಮುಂಗಾರು ಪೂರ್ವ ದಾಖಲೆಯ 115.6ಎಂಎಂ ಭಾರಿ ಮಳೆ ಆರ್ಭಟಿಸಿದ್ದು ನಾಗರೀಕರನ್ನು ಬೆಚ್ಚಿ ಬೀಳಿಸಿ ಬೆಳಗಾಗುವಷ್ಟರಲ್ಲಿ ಜಮೀನುಗಳೆಲ್ಲ ಜಲಾವೃತಗೊಂಡು ನೀರಿಲ್ಲದೆ ಬತ್ತಿದ್ದ ಹಳ್ಳ&ಕೊಳ್ಳಗಳು ತುಂಬಿ ಹರಿದವು.
ರಣ ಬಿಸಿಲಿಗೆ ಕಾದು ಕೆಂಡವಾಗಿದ್ದ ಪಟ್ಟಣದಲ್ಲಿ ಮಂಗಳವಾರ ರಾತ್ರಿ 10ರಿಂದ ಆರಂಭವಾದ ಮಳೆ ಗುಡುಗು&ಮಿಂಚಿನೊಂದಿಗೆ ಬುಧವಾರ ಬೆಳಗಿನ ಜಾವ 3ರವರಗೆ ಮುಂದುವರೆದಿದೆ. ಸುಮಾರು 5 ಗಂಟೆಗಳ ಕಾಲ ಸುರಿದ ಧಾರಕಾರ ಮಳೆಗೆ ಎರಡು ಮನೆ ಬಿದ್ದಿವೆ. ಸಮೀಪದ ನಿಂಗಾಪೂರ ಗ್ರಾಮದ ಆದಯ್ಯ ಸ್ವಾಮಿ ಸೇರಿದ ಆಕಳೊಂದು ಸಿಡಿಲಿಗೆ ಬಲಿಯಾಗಿದೆ. ಹೋಬಳಿ ವ್ಯಾಪ್ತಿಯ ಏದಲಭಾವಿ ಗ್ರಾಮದಲ್ಲಿಯೂ ಸಹ ಭಾರಿ ಪ್ರಮಾಣದ ಮಳೆಯಿಂದ ಹಳ್ಳ ತುಂಬಿ ಹರಿದ ಪರಿಣಾಮವಾಗಿ ಶಾಲಾ ಮಕ್ಕಳು, ಶಿಕ್ಷಕರು, ವಾಹನಗಳು, ಕುರಿಗಳು ಹಾಗೂ ಕುರಿಗಾಹಿಗಳು ಹಾಗೂ ಕಕ್ಕೇರಾದ ಬುಧವಾರದ ಸಂತೆಗೆ ನಾಗರೀಕರು ಸಂಚಾರಿಸಲು ಬಾರದಂತಾಗಿ ಸಂಜೆವರೆಗೂ ಪರದಾಡುವಂತಾಯಿತು.
ಈಗಾಗಲೇ ವಾಡಿಕೆಯಂತೆ ಮುಂಗಾರು ಪೂರ್ವ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ರೈತರಲ್ಲಿ ಉತ್ಸಾಹ ಇಮ್ಮಡಿಯಾಗಿದ್ದು, ರೈತರು ತಮ್ಮ ಜಮೀನುಗಳನ್ನು ಹದ ಮಾಡಿದ್ದು ಹತ್ತಿ ಬೀಜ ಊರಲು ಹಾಗೂ ತೊಗರಿ ಬೆಳೆ ಬೆಳೆಯಲು ಸನ್ನದ್ಧರಾಗಿದ್ದು ಎಲ್ಲೆಡೆ ಕಂಡು ಬಂದಿದೆ.
ಭಯಭೀತರಾದ ಜನ: ಸುಮಾರು ಸತತ ಐದು ಗಂಟೆಗಳ ಕಾಲ ಸುರಿದ ಭಾರಿ ಶಬ್ದದೊಂದಿಗೆ ಮಳೆ ಗುಡುಗು ಹಾಗೂ ಮಿಂಚಿನಿಂದಾಗಿ ಜನರ ಭಯಭೀತರಾಗಿದ್ದರು.ಪಟ್ಟಣದ ಹಾಗೂ ದೊಡ್ಡಿ, ಹಳ್ಳಿ, ತಾಂಡಾಗಳ ಜನರ ನಿದ್ದೆಗೆಡಿಸಿ ಎಲ್ಲಿ ಯಾವಾಗ ಸಿಡಿಲು ಅಪ್ಪಳಿಸುತ್ತದೆ ಎಂಬ ಆಂತಕ ಮನೆ ಮಾಡಿದ್ದಂತೂ ಸತ್ಯ.
ರಾತ್ರಿ ಇಡೀ ಭಾರಿ ಮಳೆಯಿಂದಾಗಿ ಎಲ್ಲೆಡೆ ಆತಂಕ ಸೃಷ್ಟಿಯಾಗಿದ್ದರಿಂದ ಪಟ್ಟಣದಲ್ಲಿ ಬುಧವಾರದ ಸಂತೆ ಜರುಗುವುದು ವ್ಯಾಪಾರಸ್ಥರಲ್ಲಿ ಹಾಗೂ ಗ್ರಾಹಕರಲ್ಲಿ ಸಂಶಯವಾಗಿದ್ದನ್ನ ಬುಧವಾರ ಮಳೆರಾಯ ಬಿಡುವು ಕೊಟ್ಟಿದ್ದರಿಂದ ಸುಗಮವಾಗಿ ಸಂತೆ ಜರುಗಿತು.