ನಗರದ ಹಲವೆಡೆ ಧಾರಾಕಾರ ಮಳೆ 
ರಾಜ್ಯ

ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆ: ನಾಯಂಡಹಳ್ಳಿಯಲ್ಲಿ 40 ಮಿಮಿ ದಾಖಲು-Bangalore Rain

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ಶುಕ್ರವಾರ ಸಂಜೆ ನಗರದ ಹಲವೆಡೆ ಧಾರಾಕಾರವಾಗಿ ಮಳೆ ಸುರಿದಿತ್ತು.ನಗರದ ಇತರ ಪ್ರದೇಶಗಳಕ್ಕಿಂತ ನಾಯಂಡಹಳ್ಳಿಯಲ್ಲಿ ಅತಿ ಹೆಚ್ಚು 40 ಮಿಮಿ ಮಳೆ ಬಿತ್ತು.
ಕೆಂಪೇಗೌಡ ಬಸ್ ನಿಲ್ದಾಣ, ಕೃಷ್ಣರಾಜೇಂದ್ರ ಮಾರುಕಟ್ಟೆ, ವಸಂತನಗರ, ಶಾಂತಿನಗರ, ಜಯನಗರ, ಜೆ.ಪಿ.ನಗರ, ಬನಶಂಕರಿ, ಕೋಣನಕುಂಟೆ, ಹೆಬ್ಬಾಳ, ಅರಮನೆ ರಸ್ತೆ, ಬಸವನಗುಡಿ, ಆರ್.ಟಿ. ನಗರದ, ಸದಾಶಿವನಗರ, ವಿಜಯನಗರ, ಚಂದ್ರಾ ಲೇಔಟ್, ಇಂದಿರಾನಗರ, ಲಗ್ಗೆರೆ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಸುಬ್ರಹ್ಮಣ್ಯನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ, ಮತ್ತು ಶೇಷಾದ್ರಿಪುರದಲ್ಲಿ ಬಿರುಸಾಗಿ ವರ್ಷಧಾರೆಯಾಗಿತ್ತು.
ಮಳೆಯಿಂದಾಗಿ ಗಾಂಧಿ ಬಜಾರ್ ರಸ್ತೆ, ಶೇಷಾದ್ರಿಪುರ ಮುಖ್ಯರಸ್ತೆ, ಅರಮನೆ ರಸ್ತೆ ಸೇರಿ ನಗರದ ಇತರ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದವು. ಮಾಗಡಿ ರಸ್ತೆಯ ಮೆಟ್ರೋ ಸ್ಟೇಷನ್‌ಗೆ ನೀರು ನುಗ್ಗಿದ್ದ ಪರಿಣಾಮ ಪ್ರಯಾಣಿಕರು ಪರದಾಡಿದರು. ಬಸ್ ನಿಲ್ದಾಣಗಳು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಕಂಡುಬಂದಿತು. ನೀರು ಸಂಗ್ರಹಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೆ.ಆರ್.ವೃತ್ತ ಸಮೀಪದ ಅಂಡರ್‌ಪಾಸ್ ಬಂದ್ ಮಾಡಲಾಗಿತ್ತು. ಬ್ಯಾರಿಕೇಡ್ ಹಾಕುವ ಮೂಲಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ನೀರಿನ ರಭಸಕ್ಕೆ ಕಾರು, ಬೈಕ್ ಸವಾರರು ತೊಂದರೆ ಎದುರಿಸುವಂತಾಯಿತು. ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ವಾಹನ ಚಲಾಯಿಸಲು ಪರದಾಡುವಂತಾಯಿತು. ಅಂಡರ್‌ಪಾಸ್, ಜಂಕ್ಷನ್‌ಗಳು ಹೊಂಡಗಳಂತಾದವು. ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದವರು ಮಳೆಗೆ ಸಿಲುಕಿದ್ದರು. ರಸ್ತೆ ಬದಿಗಳಲ್ಲಿ ಬೈಕ್ ನಿಲ್ಲಿಸಿ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟು ಮುಂಭಾಗ ಆಶ್ರಯ ಪಡೆದರು. ಹೆಬ್ಬಾಳ, ಹೊರವರ್ತುಲ ರಸ್ತೆ, ಸಿಲ್ಕ್‌ಬೋರ್ಡ್, ವೈಟ್‌ಫೀಲ್ಡ್ ಮತ್ತು ತುಮಕೂರು ರಸ್ತೆಯಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಕಚೇರಿಗಳಿಂದ ಹೊರಟ ಸಾರ್ವಜನಿಕರು ಗಂಟೆಗಟ್ಟಲೆ ಸಂಚಾರಸಿಕ್ಕಿನಲ್ಲಿ ಸಿಲುಕಿ ಪರದಾಡಿದರು. ಕಾಮಗಾರಿಗಳ ನಡೆಯುತ್ತಿರುವ ಸ್ಥಳಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಣೆಯಾಗಿತ್ತು.
ಶಿವಾನಂದ ಸರ್ಕಲ್, ರೈಲ್ವೆ ಅಂಡರ್‌ಪಾಸ್ ಹೊಳೆಯಂತಾಗಿದ್ದು, ಸಿಲುಕಿಕೊಂಡಿದ್ದ ಕಾರು ಕಾರು ಹೊರತೆಗೆಯಲು ಚಾಲಕ ಹರಸಾಹಸಪಟ್ಟನು. ರಸ್ತೆಯಲ್ಲಿ 2 ಅಡಿಯಷ್ಟು ನೀರು ನಿಂತ ಹಿನ್ನೆಲೆಯಲ್ಲಿ ದ್ವಿಚಕ್ರ ಸವಾರರು ಪರದಾಡಿದರು.ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮ್ಯಾನ್‌ಹೋಲ್ ಉಕ್ಕಿ ಹರಿದ ಪರಿಣಾಮ ರಸ್ತೆ ಮೇಲೆ ಕೊಳಚೆ ನೀರು ಹರಿದಿತ್ತು. ನಗರದ ಬಹುತೇಕ ರಸ್ತೆಗಳಲ್ಲಿ ಮಂದಗತಿಯಲ್ಲಿ ವಾಹನಗಳು ಸಾಗಿದವು.
ಎಲ್ಲೆಲ್ಲಿ ಎಷ್ಟು ಮಳೆ?
ಪ್ರದೇಶ ಮಳೆ ಪ್ರಮಾಣ(ಮಿಮೀಗಳಲ್ಲಿ)
ನಾಯಂಡಹಳ್ಳಿ 40
ಕಾಟನ್‌ಪೇಟೆ 39
ಸಂಪಂಗಿರಾಮನಗರ 37
ಹಂಪೆನಗರ 37
ಪುಲಕೇಶಿನಗರ 34
ಚಾಮರಾಜಪೇಟೆ 34
ಬಾಣಸವಾಡಿ ಪಶ್ಚಿಮ 31
ಕೆಂಗೇರಿ 29
ರಾಜಮಹಲ್ ಗುಟ್ಟೇಹಳ್ಳಿ 28
ವಿಶ್ವೇಶ್ವರಯ್ಯಪುರ 26
ಕೋರಮಂಗಲ 20
ರಾಜರಾಜೇಶ್ವರಿನಗರ 20
ಕೆ.ಆರ್.ಪುರ 18