ನಗರದ ಹಲವೆಡೆ ಶುಕ್ರವಾರವೂ ಮಳೆ  
ರಾಜ್ಯ

ಬೆಂಗಳೂರು ಉತ್ತರ ಭಾಗದಲ್ಲಿ ಮಳೆ ಬಿರುಸು: ಏರ್‌ಪೋರ್ಟ್ ರಸ್ತೆಯಲ್ಲಿ ಸಂಚಾರ ಸಿಕ್ಕು- rain in north Bengaluru

ಬೆಂಗಳೂರು: ನಗರದ ಹಲವೆಡೆ ಶುಕ್ರವಾರವೂ ಮಳೆ ಮುಂದುವರಿದಿತ್ತು. ಬೆಂಗಳೂರು ಉತ್ತರ ಭಾಗದಲ್ಲಿ ರಭಸವಾಗಿ ಮಳೆ ಸುರಿದಿತ್ತು. ಇದರಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ರಸ್ತೆ ಜಲಾವೃತ್ತವಾಗಿತ್ತು.

ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಣೆಯಿಂದ ವಾಹನ ಸವಾರರು ಪರದಾಡಿದ್ದರು. ಮಧ್ಯಾಹ್ನ ಮತ್ತು ಸಂಜೆ ವೇಳೆ ಕೆಲ ಪ್ರದೇಶಗಳಲ್ಲಿ ಬಿರುಸಾಗಿತ್ತು. ತಡರಾತ್ರಿವರೆಗೂ ಮಳೆ ಹನಿಗಳು ಬೀಳುತ್ತಿತ್ತು.

ನಗರದ ಪ್ರಮುಖ ಜಂಕ್ಷನ್, ಅಂಡರ್‌ಪಾಸ್‌ಗಳಲ್ಲಿ ಮಳೆನೀರು ನಿಂತಿತ್ತು. ಪರಿಣಾಮ ವಾಹನಗಳು ನಿಧಾನ ಗತಿಯಲ್ಲಿ ಸಾಗಿದವು. ಕೆಲ ರಸ್ತೆಗಳಲ್ಲಿ ಮಳೆನೀರು ನಿಂತಿದ್ದರಿಂದ ತುಸು ಸಂಚಾರ ಸಿಕ್ಕು ಉಂಟಾಯಿತು.
ಕೃಷ್ಣರಾಜೇಂದ್ರ ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ, ಕೆಂಗೇರಿ, ನಾಯಂಡಹಳ್ಳಿ, ಚಾಮರಾಜಪೇಟೆ, ಬಸವನಗುಡಿ, ಆರ್.ಟಿ.ನಗರ, ಬಿಟಿಎಂ ಲೇಔಟ್, ಕೆ.ಆರ್. ಪುರ, ಸಹಕಾರನಗರ, ಜಯನಗರ, ಬಸವನಗುಡಿ, ಜೆ.ಪಿ.ನಗರ, ಹನುಮಂತನಗರ, ಮಲ್ಲೇಶ್ವರ, ಯಶವಂತಪುರ, ಶಿವಾಜಿನಗರ, ವಿಜಯನಗರ, ದಾಸರಹಳ್ಳಿ, ಪೀಣ್ಯ, ವೈಟ್‌ಫೀಲ್ಡ್ ಹಾಗೂ ಸರ್ಜಾಪುರ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ಸಾಧಾರಣ ಮಳೆಯಾಗಿತ್ತು.
60ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಮಳೆ ಬಿತ್ತು. ಈ ವೇಳೆ ಬಸ್ ನಿಲ್ದಾಣಗಳು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಉಂಟಾಯಿತು. ಎಂದಿನಂತೆ ಮೈಸೂರು ರಸ್ತೆ, ಹೆಬ್ಬಾಳ ರಸ್ತೆ ಸೇರಿ ಹಲವೆಡೆ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ಮಳೆಯಿಂದಾಗಿ ಉಷ್ಣಾಂಶ ಇಳಿಮುಖವಾಗಿತ್ತು.
5 ದಿನ ಮುಂದುವರಿಕೆ: ಗರದ ಹಲವೆಡೆ ಸುರಿಯುತ್ತಿರುವ ಮಳೆ, ಮುಂದಿನ 5 ದಿನ ಮುಂದುವರಿಯಲಿದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಡಿ.ಸೆ. ಮತ್ತು 21 ಡಿ.ಸೆ. ಉಷ್ಣಾಂಶ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.