ಅರಕಲಗೂಡಿನಲ್ಲಿ ಮಂಗಳವಾರ ಬಿದ್ದ ಮಳೆಯಿಂದಾಗಿ ದಿನವಹಿ ಮಾರುಕಟ್ಟೆ ಪ್ರದೇಶ ಸ್ತಬ್ಧವಾಗಿತ್ತು.
ಅರಕಲಗೂಡು: ಪಟ್ಟಣದಲ್ಲಿ ಮಂಗಳವಾರ ಕೆಲಕಾಲ ಮಳೆ ಆರ್ಭಟಿಸಿತು. ಆಗಸದಲ್ಲಿ ಮೋಡಗಳು ದಟ್ಟೈಸಿ ಮಧ್ಯಾಹ್ನದ ನಂತರ ಶುರುವಾದ ಮಳೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಅಬ್ಬರಿಸಿತು.
ಮಳೆಗಿಂತ ಸಿಡಿಲು ಗುಡುಗಿನ ಆರ್ಭಟ ಜೋರಾಗಿತ್ತು. ದಿಢೀರ್ ಬಿದ್ದ ಮಳೆಗೆ ಪಟ್ಟಣದ ದಿನವಹಿ ಮಾರುಕಟ್ಟೆಗಳಲ್ಲಿ ವ್ಯಾಪಾರಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವ್ಯಾಪಾರಕ್ಕಾಗಿ ಬಂದಿದ್ದ ಗ್ರಾಹಕರು ರಸ್ತೆಬದಿ ಅಂಗಡಿಗಳಲ್ಲಿ ಆಶ್ರಯ ಪಡೆದರು.
ಮುಂಡಗೋಡು, ಹಾರೋಹಳ್ಳಿ, ಚಿಕ್ಕ ಅರಕಲಗೂಡು ಭಾಗದಲ್ಲಿ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆ ಜೋರಾಗಿ ಸುರಿಯಿತು. ದೊಡ್ಡಮಗ್ಗೆ, ಕೊಣನೂರು, ರಾಮನಾಥಪುರ ಹೋಬಳಿ ಭಾಗದಲ್ಲಿ ಮಳೆ ಕ್ಷೀಣಿಸಿತ್ತು.