ಘಟನೆಯ ಸ್ಥಳ 
ರಾಜ್ಯ

ಬಿರುಗಾಳಿ ಸಹಿತ ಭಾರೀ ಮಳೆ; ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ದುರ್ಮರಣ | roof collapses

ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿ ಗ್ರಾಮದಲ್ಲಿ ನಿನ್ನೆ(ಮೇ 14) ರಾತ್ರಿ ಸುರಿದ ಭಾರೀ ಗಾಳಿ ಸಹಿತ ಮಳೆಗೆ ಹಳೆಯ ಮನೆಯ ಮೇಲ್ಚಾವಣಿ ಕುಸಿದು(roof collapses) ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಮೋರಟಗಿ ಗ್ರಾಮದ ಗುರುನಾಥ ಬಡಿಗೇರ(35), ಪತ್ನಿ ಜ್ಯೋತಿ ಬಡಿಗೇರ(28), ಪುತ್ರಿಯರಾದ ಕಾಳಮ್ಮ ಬಡಿಗೇರ (13) ಮತ್ತು ಕೀರ್ತಿ ಬಡಿಗೇರ(9) ಎಂದು ಗುರುತಿಸಲಾಗಿದೆ. ಗುರುನಾಥ ಬಡಿಗೇರ ಅವರ ಸ್ವಂತ ಮನೆಯ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ಕುಟುಂಬವು ಗ್ರಾಮದಲ್ಲಿರುವ ಹಳೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ನಿನ್ನೆ ರಾತ್ರಿ ಬೀಸಿದ ಭೀಕರ ಗಾಳಿ-ಮಳೆಗೆ ಮನೆಯ ಮೇಲ್ಚಾವಣಿ ಏಕಾಏಕಿ ಕುಸಿದು ಬಿದ್ದಿದೆ. ಮಲಗಿದ್ದಲ್ಲೇ ಪತಿ, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಅವಶೇಷಗಳಡಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಂದಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಾಲ್ವರ ಶವಗಳನ್ನು ಹೊರತೆಗೆದಿದ್ದಾರೆ.
ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾದ ಹಿನ್ನೆಲೆಯಲ್ಲಿ ಮೋರಟಗಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.