ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಕೋರಿ ಇಬ್ಬರು ಆರೋಪಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.
ತುಮಕೂರಿನ ಎಂ. ಸುಹಾಸ್ ಮತ್ತು ಆರ್.ಜಿ. ವೇಣು ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಬೆದರಿಕೆ ಹಾಕಿದ ಬಗ್ಗೆ ಸಾಕ್ಷಿಯು ನೇರವಾಗಿ ದೂರು ದಾಖಲಿಸಿಲ್ಲ. ಸಹಾಯಕ ಪೊಲೀಸ್ ಕಮಿಷನರ್ ವರದಿ ಆಧರಿಸಿ ಕೇಸ್ ಮಾಡಲಾಗಿದೆ. ಸಾಕ್ಷಿ ಹೇಳಿಕೆಯನ್ನು ಅವರು ಈಗಾಗಲೇ ನ್ಯಾಯಾಲಯದ ಮುಂದೆ ನೀಡಿದ್ದಾರೆ. ಅದರಲ್ಲಿ ಅವರು ಸುಳ್ಳು ಹೇಳಿಲ್ಲ. ಸಾಕ್ಷಿಗಳಿಗೆ ರಕ್ಷಣೆ ನೀಡಿ ವಿಚಾರಣಾ ನ್ಯಾಯಾಲಯವು ಈಗಾಗಲೇ ಆದೇಶಿಸಿದೆ. ಆದರೂ ಪೊಲೀಸರು ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ವಾದಿಸಿದರು.
ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿ, ಸಾಗೆ ಪರಿಚಯ ಇರುವ ಆಕರ್ಷ್ ಎಂಬವರು ಕಾರಿನಲ್ಲಿ ಕೂರಿಸಿಕೊಂಡು, ಪ್ರಭಾವ ಬೀರಲು ಯತ್ನಿಸಲಾಗಿದೆ. ಕೊಲೆ ಆರೋಪಿಗಳ ಬಗ್ಗೆ ಕೇಳಿದರೆ ತಿಳಿದಿಲ್ಲ ಎಂದು ಹೇಳಬೇಕು. ವಿಡಿಯೋ ಕ್ಲಿಪ್ಗಳನ್ನು ಪೊಲೀಸರೇ ಡಿವಿಆರ್ನಿಂದ ಕಾಪಿ ಮಾಡಿಕೊಂಡು, ಸಹಿ ಹಾಕಿಸಿದ್ದಾರೆ ಎಂದು ಸಾ ನುಡಿಯಬೇಕು ಎಂದು ಆರೋಪಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ಪ್ರಭಾವ ಬೀರಲು ಯತ್ನ:
ಪ್ರತಿಕ್ರಿಯಿಸಿದ ನ್ಯಾಯಪೀಠ, ಹೀಗೆ ಹೇಳಬೇಕು ಎಂದು ಆರೋಪಿಗಳು ಹೇಳಿಕೆ ಮಾತ್ರ ನೀಡಿದ್ದರೆ ಅದನ್ನು ಸಾಕ್ಷಿಗಳಿಗೆ ಬೆದರಿಕೆ ಎಂದು ಪ್ರಕರಣ ದಾಖಲಿಸಲಾಗದು ಎಂದರು. ಇದಕ್ಕೆ ಉತ್ತರಿಸಿದ ಪ್ರಾಸಿಕ್ಯೂಷನ್ ಪರ ವಕೀಲರು, ಹುಲಿ ಬಂದು ನಿಂತಾಗ ಅದು ಹೆದರಿಸಬೇಕು ಎಂದೇನು ಇಲ್ಲ. ಆದರೂ, ಭಯವಾಗುತ್ತದೆ. ಅದೇ ರೀತಿಯ ಉದ್ದೇಶ ಇಲ್ಲಿದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನವೂ ನಡೆದಿದೆ. ಸಾಕ್ಷಿಗಳು ಪ್ರಭಾವಕ್ಕೆ ಒಳಗಾಗಿಲ್ಲ ಎಂದ ಮಾತ್ರಕ್ಕೆ ಅಪರಾಧ ಇಲ್ಲವಾಗುವುದಿಲ್ಲ ಎಂದರು. ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿತು.