health-minister-inspects-hospital-late-at-night 
ರಾಜ್ಯ

ಅರೋಗ್ಯ ಸಚಿವರಿಂದ ತಡರಾತ್ರಿ ಆಸ್ಪತ್ರೆ ಪರಿಶೀಲನೆ

ಪ್ರಮುಖ ಮುಖ್ಯಾಂಶಗಳು

  • * ಜಯನಗರ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ
  • * ಗೈರಾಗಿದ್ದ ವೈದ್ಯರಿಗೆ ಎಚ್ಚರಿಕೆ ಸಂದೇಶ
ಬೆಂಗಳೂರು: ತಡರಾತ್ರಿ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಆರೋಗ್ಯ ಸಚಿವ ಯು.ಟಿ. ಖಾದರ್ ಆಸ್ಪತ್ರೆಯಲ್ಲಿನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಆರೋಗ್ಯ ಖಾತೆ ಹಂಚಿಕೆಯಾದ ಬೆನ್ನಲ್ಲೇ ಮಂಗಳವಾರ ಮಧ್ಯರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆ ಮತ್ತು ಸಿಬ್ಬಂದಿ ಕಾರ್ಯವೈಖರಿ ಹಾಗೂ ಪರಿಶೀಲಿಸಿದರು. ಚಿಕಿತ್ಸೆ ಹಾಗೂ ವೈದ್ಯಕೀಯ ಸೌಲಭ್ಯ ಮತ್ತು ಸೇವೆಗಳ ಕುರಿತು ರೋಗಿಗಳಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ಗರ್ಭಿಣಿಯೊಬ್ಬರು ನೆಲದ ಮೇಲೆ ಕುಳಿತಿರುವುದನ್ನ ಕಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಆಕೆಯನ್ನು ಮೇಲೆ ಕೂರಿಸುವಂತೆ ಸೂಚಿಸಿ, ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಕೆ ನೀಡಿದರು. ಬಳಿಕ ಹೆರಿಗೆ ಕೊಠಡಿ, ಸಿಸೇರಿಯನ್ ವಾರ್ಡ್ ಸೇರಿ ಎಲ್ಲೆಡೆ ಪರಿಶೀಲನೆ ನಡೆಸಿದರು. ಈ ವೇಳೆ ಗೈರಾಗಿದ್ದ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಗೈರಾದವರಿಗೆ ಎಚ್ಚರಿಕೆ:
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಆಸ್ಪತ್ರೆಯಲ್ಲಿನ ನೈಜ ಪರಿಸ್ಥಿತಿ ನೋಡಲು ಬಂದೆ. ಏನೆಲ್ಲಾ ಲೋಪದೋಷಗಳು ಇವೆ ಎಂಬುದನ್ನು ನೋಡಿದ್ದೇನೆ. ಆಸ್ಪತ್ರೆ ಪರಿಶೀಲನೆ ವೇಳೆ ಇಬ್ಬರು ವೈದ್ಯರು ಗೈರಾಗಿದ್ದು, ಎಚ್ಚರಿಕೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.
ಪ್ರತ್ಯೇಕ ಅಧಿಕಾರಿ ನಿಯೋಜನೆ:
ಆರೋಗ್ಯ ಇಲಾಖೆಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಯೋಜನೆ, ಚಿಕಿತ್ಸೆಗಳ ಮೇಲ್ವಿಚಾರಣೆಗೆ ಸೂಕ್ತ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರತ್ಯೇಕ ಅಧಿಕಾರಿ ನಿಯೋಜಿಸುವ ಕುರಿತು ಯೋಚಿಸಲಾಗುವುದು ಎಂದು ಸಚಿವರು ಹೇಳಿದರು. ಆರೋಗ್ಯ ವ್ಯವಸ್ಥೆಯನ್ನು ತಳಮಟ್ಟದಿಂದ ಅರ್ಥಮಾಡಿಕೊಳ್ಳುವುದು ಅಗತ್ಯ. ಪರಿಸ್ಥಿತಿ ನೋಡಿಕೊಂಡು ವೈದ್ಯಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲಾಖೆಯನ್ನು ಮುನ್ನಡೆಸಲಾಗುವುದು. ಹಾಗೆಯೇ ಆಲಸ್ಯ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಬಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದು ಸೇರಿ ಹಲವು ಯೋಜನೆಗಳು ಸಮರ್ಪಕವಾಗಿ ನಡೆಯುವಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.