Health Care by Mobile Ambulance
ಶಿರಾ: ಗ್ರಾಮೀಣ ಭಾಗದ ಜನರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಚಿಕಿತ್ಸೆ ಪಡೆಯಲು ನಗರದ ಆಸ್ಪತ್ರೆಗೆ ಹೋಗುವುದಿಲ್ಲ. ಈಗ ಮೊಬೈಲ್ ಆಂಬ್ಯುಲೆನ್ಸ್ ವೈದ್ಯಕಿಯ ತಪಾಸಣೆ ವಾಹನದಿಂದ ಗ್ರಾಮೀಣರಿಗೆ ಅನುಕೂಲವಾಗಲಿದೆ ಎಂದು ಜೆಡಿಎಸ್ ಮುಖಂಡ ಆರ್.ವೆಂಕಟೇಶ್ ತಿಳಿಸಿದರು.
ರಾಶಿ ಸೀಡ್ಸ್ ಸಂಸ್ಥೆಯಿಂದ ತುಮಕೂರು ಜಿಲ್ಲೆಗೆ ನೀಡಲಾದ ಉಚಿತ ಮೊಬೈಲ್ ವೈದ್ಯಕಿಯ ಸೇವೆ ವಾಹನಕ್ಕೆ ತಾಲೂಕಿನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಈ ವಾಹನ ಪ್ರತಿಯೊಂದು ಗ್ರಾಮಕ್ಕೂ ಹೋಗುವುದರಿಂದ ಗ್ರಾಮೀಣರಿಗೆ ಸ್ಥಳಿಯವಾಗಿ ಆರೋಗ್ಯ ತಪಾಸಣೆ ಸಾಧ್ಯವಾಗುತ್ತದೆ ಎಂದರು.
ಮೊಬೈಲ್ ಚಿಕಿತ್ಸಾ ವಾಹನದಲ್ಲಿ ವೈದ್ಯರು ಹಾಗೂ ಸಹಾಯಕರು ಇರುವುದರಿಂದ ಔಷಧಗಳು ಸಹ ಉಚಿತವಾಗಿ ನೀಡಲಾಗುತ್ತದೆ. ಕಂಪನಿ ನಿಗದಿಪಡಿಸಿದ ದಿನಾಂಕದಂದು ಆಯಾ ಗ್ರಾಮಕ್ಕೆ ಮೊಬೈಲ್ ಸೇವೆ ಒದಗಿಸಲಾಗುತ್ತದೆ ಎಂದರು.
ಶಿರಾ ಭಾಗದ ರೈತರಿಗೆ ರಾಶಿ ಸೀಡ್ಸ್ ಸಂಸ್ಥೆಯು ಆರೋಗ್ಯ ಭಾಗ್ಯ, ರೈತರು ಹತ್ತಿ ಬೆಳೆಯಲು ಬೇಕಾಗುವ ಸೀಡ್ಸ್ ಗೊಬ್ಬರ ಹಾಗೂ ವ್ಯವಸಾಯಕ್ಕೆ ತಗಲುವ ವೆಚ್ಚ ನೀಡುತ್ತಿದೆ. ಇದಲ್ಲದೆ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಮಾಡುತ್ತಿರುವುದು ಶ್ಲಾನೀಯ ಎಂದರು.
ಶಿರಾ ಗ್ರಾಮಾಂತರ ವೃತ್ತ ನಿರೀಕ್ಷಕ ಡಿ.ಶ್ರೀನಿವಾಸ್, ಎಪಿಎಂಸಿ ಕಾರ್ಯದರ್ಶಿ ಅನುರಾಧಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ರಾಶಿ ಸೀಡ್ಸ್ ಭಾಸ್ಕರ್, ಜಯಪ್ರಕಾಶ್ ನಾರಾಯಣಸ್ವಾಮಿ, ವಿವೇಕಾನಂದ, ದೇವರಾಜ್, ಚಿದಾನಂದ ಮೂರ್ತಿ, ರಾಘವೇಂದ್ರ ಇದ್ದರು.