ಆನೇಕಲ್ ಪಟ್ಟಣದ ಶ್ರೀಧರ್ಮರಾಯಸ್ವಾಮಿ ದೇವಾಲಯದ ದ್ರೌಪದಮ್ಮ ಕರಗ ಮಹೋತ್ಸವದಲ್ಲಿ ಕರಗ ಹೊತ್ತು ಸಾಗಿದ ರಮೇಶ್.
ಆನೇಕಲ್ : ಆನೇಕಲ್ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ದ್ರೌಪದಮ್ಮ ದೇವಿ ಹಸಿ ಕರಗ ಉತ್ಸವ ಬುಧವಾರ ಅದ್ದೂರಿಯಾಗಿ ನೆರವೇರಿತು. ಪಟ್ಟಣದ ಸಂತೆಮಾಳದಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯದಿಂದ ತಡರಾತ್ರಿ 3.20ರ ಸುಮಾರಿಗೆ ಅರ್ಚಕ ರಮೇಶ್ ಕರಗ ಹೊತ್ತು ಮಂಡಿಯೂರಿ ಹೊರ ಬರುತ್ತಿದ್ದಂತೆ ದೇಗುಲ ಮುಂಭಾಗದಲ್ಲಿ ವೀರಕುಮಾರರು ಅಲಗು ಸೇವೆ ನಡೆಸಿದರು. ನೆರೆದಿದ್ದ ಭಕ್ತರ "ಗೋವಿಂದ ಗೋವಿಂದ' ಎಂಬ ನಾಮಸ್ಮರಣೆ ಮುಗಿಲುಮುಟ್ಟಿತು.
ವಿಶ್ವ ವಿಖ್ಯಾತ ಬೆಂಗಳೂರು ಕರಗದಂದೇ ಆನೇಕಲ್ ಪಟ್ಟಣದಲ್ಲಿ ಕರಗ ಉತ್ಸವ ನಡೆಯುವುದು ವಿಶೇಷ. ಕುಲಸ್ಥರು ಹಾಗೂ ಅರ್ಚಕರ ನಡುವೆ ವಿವಾದ ಇದ್ದು, ಈ ಬಾರಿ ಕರಗವನ್ನು ಅರ್ಚಕರ ಕುಟುಂಬದ ರಮೇಶ್ ಪರವಾಗಿ ತೀರ್ಪು ಬಂದ ಹಿನ್ನೆಲೆಯಲ್ಲಿ ರಮೇಶ್ ಕರಗ ಹೊರಲು ಸಿದ್ಧತೆ ಮಾಡಿಕೊಂಡಿದ್ದರು.
ಕರಗ ವೀಕ್ಷಣೆಗೆ ಆನೇಕಲ್ ಹಾಗೂ ಸುತ್ತಮುತ್ತಲಿನ ಗ್ರಾಮ, ಪಟ್ಟಣಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ದ್ರೌಪದಿ ದೇವಿಯ ಹೂವಿನ ಕರಗ ಹೊತ್ತು ಬಂದ ಬಳಿಕ ಶಂಕರಮಠದಲ್ಲಿ ಪೂಜೆ ಸಲ್ಲಿಸಿ ಸಂತೆ ಮಾಳದ ಮೂಲಕ ವೀರವಸಂತರಾಯನ (ಬಲರಾಮನ) ಮೂರ್ತಿಯ ಬಳಿಗೆ ಬಂದು ಅಲ್ಲಿಂದ ಪಟ್ಟಣದ ತಿಲಕ್ ವೃತ್ತ, ಥಳಿ ರಸ್ತೆ, ಚರ್ಚ್ ರೋಡ್, ದೇವರಕೊಂಡಪ್ಪ ವೃತ್ತ, ಕೆಇಬಿ ಕಚೇರಿ, ಶ್ರೀರಾಮ ದೇವಾಲಯ ಸರ್ಕಲ್, ಭಜನೆ ಮನೆ ಬೀದಿ, ತಾಲೂಕು ಕಚೇರಿ ರಸ್ತೆ ಸೇರಿ ವಿವಿಧ ಬೀದಿಗಳಲ್ಲಿ ಸಾಗಿ ಬಂದ ಕರಗವನ್ನು ಭಕ್ತರು ಕಣ್ತುಂಬಿಕೊಂಡರು.
ಪೊಲೀಸ್ ಬಂದೋಬಸ್ತ್ : ಮುಂಜಾನೆ 5.40ರ ಸುಮಾರಿಗೆ ದೇವಾಲಯಕ್ಕೆ ಕರಗ ಮರಳಿತು. ದೇವಾಲಯಕ್ಕೆ ಮೂರು ಸುತ್ತು ಪ್ರದಣೆ ಹಾಕಿದ ಸಂದರ್ಭದಲ್ಲಿ 15 ನಿಮಿಷಗಳಿಗೂ ಹೆಚ್ಚು ಕಾಲ ಕರಗ ಹೊತ್ತು ಪೂಜಾರಿ ರಮೇಶ್ ನರ್ತನ ಮಾಡಿ ಬಳಿಕ ಮತ್ತೆ ಮಂಡಿಯೂರಿ ದೇವಾಲಯಕ್ಕೆ ಮರಳಿದರು. ಪಟ್ಟಣದ ಪ್ರಮುಖ ವೃತ್ತಗಳು ಮತ್ತು ಬೀದಿಗಳಲ್ಲಿ ಮೆರವಣಿಗೆ ಅದ್ದೂರಿಯಾಗಿ ಸಾಗಿತ್ತು, ಮನೆಗಳ ಮುಂದೆ ರಂಗೋಲಿ ಹಾಕಿ ಮುತ್ತೆದೆಯರು ಅಮ್ಮನವರಿಗೆ ಆರತಿ ಎತ್ತಿ ಪೂಜೆ ಸಲ್ಲಿಸಿದರು. ಗ್ರಾಮ ದೇವತೆಗಳ ಪಲ್ಲಕ್ಕಿಗಳ ಉತ್ಸವವನ್ನು ಪ್ರಮುಖ ಸರ್ಕಲ್ಗಳಲ್ಲಿ ಆಯೋಜಿಸಲಾಗಿತ್ತು. ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪ್ರತಿ ವೃತ್ತಗಳಿಗೆ ಕರಗ ಉತ್ಸವ ಆಗಮಿಸುತ್ತಿದ್ದಂತೆ ಪೋಲಿಸರು ಗುಂಪುಗುಂಪಾಗಿ ಸೇರುತ್ತಿದ್ದ ಜನರನ್ನು ದೂರಸರಿಸಿ ಕರಗ ಕುಣಿತಕ್ಕೆ ವ್ಯವಸ್ಥೆ ಮಾಡಿದರು.
ಕುಣಿದು ಕುಪ್ಪಳಿಸಿದ ಭಕ್ತರು : ಯಶಸ್ವಿಯಾಗಿ ಹಸಿ ಕರಗ ಉತ್ಸವ ಪೂರೈಸಿ ದೇವಾಲಯದ ಒಳಗೆ ಮರಳಿ ಕರಗ ಹೋಗುತ್ತಿದ್ದಂತೆ ನೆರದಿದ್ದ ಭಕ್ತರು ದೇವಾಲಯದ ಬಳಿ ಕುಣಿದು ಕುಪ್ಪಳಿಸಿದರು. ಕರಗ ಉತ್ಸವ ಸಾಗುತ್ತಿದ್ದ ರಸ್ತೆಗಳಲ್ಲಿ ಜನಸಾಗರ ನೆರೆದಿದ್ದರಿಂದ ಪೊಲೀಸರು ಜನರನ್ನು ನಿಭಾಯಿಸಿದರು. ಜನ ಸಂದಣಿಯಿಂದ ಅಲ್ಲಲ್ಲಿ ನೂಕಾಟ ತಳ್ಳಾಟ ಜೋರಾಗಿ ನಡೆಯಿತು. ಕಳೆದ ಬಾರಿ ಕರಗ ಹೊತ್ತಾಗ ಪೂಜಾರಿ ರಮೇಶ್ ಸ್ವಲ್ಪ ಸುಸ್ತಾದವರಂತೆ ಕಂಡಿದ್ದರು. ಆದರೆ ಈ ಬಾರಿ ಕೊನೆಯವರೆಗೂ ಮುಖದಲ್ಲಿನ ಮಂದಹಾಸದ ಜತೆಗೆ ಮೋಡಿರಾಗಕ್ಕೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.
ಇಂದು ಕೋಟೆ ಜಗಳ : ಕರಗ ಮಹೋತ್ಸವದ ಅಂಗವಾಗಿ ವೀರ ವಸಂತರಾಯ(ಬಲಿರಾಮ) ಪ್ರತಿಷ್ಠಾಪನೆಯಾಗಿದ್ದು, ಇಂದು ಸಂಜೆ ಕೋಟೆ ಜಗಳ ನಡೆಯಲಿದೆ. ಧರ್ಮರಾಯಸ್ವಾಮಿ ದೇವಾಲಯದ ಮುಂದಿನ ಸಂತೆ ಮಾಳದಲ್ಲಿ ನಡೆಯುವ ವಿಶೇಷ ಉತ್ಸವದಲ್ಲಿ ಹಣ ಕೊಟ್ಟು ಪೊರಕೆಯಿಂದ ಏಟು ತಿನ್ನುವ ಅಭಿಮನ್ಯು ಪದ್ಮವ್ಯೂಹ ಭೇದಿಸುವ ಕೋಟೆ ಜಗಳ ನಡೆಯಲಿದೆ. ಹಸಿ ಕರಗದಂತೆ ಒಣ ಕರಗ ಉತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಲಿದೆ. ಸಂತೆ ಮಾಳದಲ್ಲಿ ಕರಗ ಹೊತ್ತು ಅಗ್ನಿಕುಂಡ ಬಳಿ ನರ್ತನ ಹಾಗೂ ಧರ್ಮರಾಯಸ್ವಾಮಿ ವಿಶೇಷ ಉತ್ಸವ ನಡೆಯಲಿದೆ.