HD Kumaraswamy | ಸಿಎಂ ಡಿಕೆಶಿಗೆ ಎಚ್​​ಡಿಕೆ ಮತ್ತೊಂದು ಪತ್ರ 
ರಾಜ್ಯ

ಸಿಎಂ ಡಿಕೆಶಿಗೆ ಎಚ್​​ಡಿಕೆ ಮತ್ತೊಂದು ಪತ್ರ; ಗ್ರೇಟರ್ ಬೆಂಗಳೂರು ಅಧಿಕಾರಿಗಳ ಜೊತೆ ಬೈರಮಂಗಲಕ್ಕೆ ಬನ್ನಿ ಎಂದು ಆಹ್ವಾನ | HD Kumaraswamy

ಬೆಂಗಳೂರು: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯಿಂದ ಬಾಧಿತರಾಗುವ ಜನರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಜೂನ್ 22 ರಂದು ಉಭಯ ನಾಯಕರ ನಡುವೆ ನಡೆದ ಪತ್ರ ವ್ಯವಹಾರವನ್ನು ನೆನಪಿಸಿರುವ ಕುಮಾರಸ್ವಾಮಿ, ತಮ್ಮ ಹಿಂದಿನ ಪತ್ರಕ್ಕೆ ಮುಖ್ಯಮಂತ್ರಿಗಳಿಂದ ಉತ್ತರದ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಜೂನ್ 27 ರಂದು ಬೈರಮಂಗಲ ಗ್ರಾಮಕ್ಕೆ ಕುಮಾರಸ್ವಾಮಿ ಭೇಟಿ

ಬಿಡದಿಯಲ್ಲಿ ರಚಿಸಲು ಉದ್ದೇಶಿಸಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯಿಂದಾಗಿ ಸ್ಥಳೀಯ ರೈತರು, ಕೃಷಿ ಕಾರ್ಮಿಕರು, ಹೈನುಗಾರಿಕೆಯಲ್ಲಿ ತೊಡಗಿರುವ ರೈತ ಮಹಿಳೆಯರು, ಸಣ್ಣ ಉದ್ಯಮಿಗಳು ಹಾಗೂ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಧಿತ ವರ್ಗದ ಜನರ ಅಹವಾಲುಗಳು ಮತ್ತು ಕುಂದುಕೊರತೆಗಳನ್ನು ಖುದ್ದಾಗಿ ಆಲಿಸಲು ತಾವು ಇದೇ ಜೂನ್ 27 ರಂದು ಬೈರಮಂಗಲ ಗ್ರಾಮಕ್ಕೆ ಭೇಟಿ ನೀಡುತ್ತಿರುವುದಾಗಿ ಕೇಂದ್ರ ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರವಾಸದ ಅಧಿಕೃತ ಕಾರ್ಯಕ್ರಮದ ಪ್ರತಿಯನ್ನು ಸಿಎಂ ಅವರ ಅವಗಾಹನೆಗಾಗಿ ಪತ್ರದೊಂದಿಗೆ ಲಗತ್ತಿಸಿದ್ದಾರೆ.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಜೂನ್ 27 ರಂದು ಬೈರಮಂಗಲ ಗ್ರಾಮಕ್ಕೆ ಬರಬೇಕೆಂದು ಕುಮಾರಸ್ವಾಮಿ ಅವರು ಪತ್ರದ ಮೂಲಕ ಆಹ್ವಾನ ನೀಡಿದ್ದಾರೆ. ನಾವಿಬ್ಬರೂ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿದರೆ ಬಾಧಿತ ಜನರ ಸಂಕಷ್ಟಗಳನ್ನು ನೇರವಾಗಿ ಆಲಿಸಬಹುದಾಗಿದೆ. ಅಷ್ಟೇ ಅಲ್ಲದೆ, ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸ್ಥಳದಲ್ಲೇ ಪರ್ಯಾಯ ಮಾರ್ಗಗಳ ಬಗ್ಗೆ ಜಂಟಿಯಾಗಿ ಯೋಚಿಸಲು ಸಾಧ್ಯವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.