ಎಚ್.ಡಿ.ಕುಮಾರಸ್ವಾಮಿ 
ರಾಜ್ಯ

ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಎಚ್‌ಡಿಕೆ; ಸಾಮಾಜಿಕ ನ್ಯಾಯದ ಸೋಗುಕಾರ, ಸಾಮಾಜಿಕ ನ್ಯಾಯದ ಸಂಹಾರಿ ಎಂದು ಟೀಕೆ

ಟಿ.ವಿ.ಶಿವಾನಂದ ತಗಡೂರು

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ನ್ಯಾಯದ ಸೋಗುಕಾರ, ಸಾಮಾಜಿಕ ನ್ಯಾಯದ ಸಂಹಾರಿ
  • ರಾಜಕೀಯ ಶಕ್ತಿ-ಬದುಕು ಕೊಟ್ಟ ದೇವೇಗೌಡರ ಕಡೆ ಬೆಟ್ಟು ಮಾಡುವುದು ಆಘಾತಕಾರಿ
ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಎಚ್‌ಡಿಕೆ
ಸಾಮಾಜಿಕ ನ್ಯಾಯದ ಸೋಗುಕಾರ, ಸಾಮಾಜಿಕ ನ್ಯಾಯದ ಸಂಹಾರಿ ಎಂದು ಟೀಕೆ
ಬೆಂಗಳೂರು:
ಸಾಮಾಜಿಕ ನ್ಯಾಯದ ಸೋಗುಕಾರ, ಸಾಮಾಜಿಕ ನ್ಯಾಯದ ಸಂಹಾರಿ ನೀವು ಎಂದು ಕಟು ಶಬ್ದಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕೆ ಮಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಕುರ್ಚಿಗಾಗಿ ಜಾತಿ ಎಳೆದು ತಂದಿದ್ದಾರೆ ಎಂದು ನಾನು ತಮಾಷೆಗೆ ಹೇಳಿದ್ದಲ್ಲ, ಸೀರಿಯಸ್ಸಾಗೇ ಹೇಳಿದ್ದೇನೆ ಎಂದು ಕುಟುಕಿದ್ದಾರೆ.
ಈ ಬಗ್ಗೆ ಸುಧೀರ್ಘವಾಗಿ ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯನವರೇ, ನಾನು ಸುತ್ತಿಬಳಸಿ ಮಾತನಾಡಲ್ಲ. ನೇರವಾಗಿ ವಿಷಯಕ್ಕೇ ಬರುತ್ತೇನೆ ಎಂದು ಮೊದಲೇ ಸ್ಪಷ್ಟಪಡಿಸಿದ್ದಾರೆ.
ತಮಾಷೆಗೆ ಹೇಳಿದ್ದೇನೆ ಎಂದಿಟ್ಟುಕೊಳ್ಳಿ, ನೀವು ಇಷ್ಟುದ್ದ ಉತ್ತರ ಬರೆಯುವ ಅಗತ್ಯವಿರಲಿಲ್ಲ. ಈ ಬಗ್ಗೆ ನೀವು ಸೀರಿಯಸ್ ಆಗಿದ್ದೀರಿ ಎಂಬುದನ್ನು ಬಲ್ಲೆ. ಹಾಗಿದ್ದರೂ ನನ್ನ ಹೇಳಿಕೆಯನ್ನು ನೀವು ತಮಾಷೆಯಾಗಿಯೇ ಸ್ವೀಕರಿಸಿ, ಅಭ್ಯಂತರವಿಲ್ಲ ಎಂದಿದ್ದಾರೆ.
ನಿಮಗೆ ರಾಜಕೀಯ ಶಕ್ತಿ-ಬದುಕು ಕೊಟ್ಟ ದೇವೇಗೌಡರ ಕಡೆ ಬೆಟ್ಟು ಮಾಡುವುದು ಆಘಾತಕಾರಿ. ಇವತ್ತು ನಿಮಗೆ ಸಿಕ್ಕಿರುವ ಅಧಿಕಾರ, ಸಾಮಾಜಿಕ ನ್ಯಾಯಕಾರ ಎಂಬ ಪೋಷಾಕು ಎಲ್ಲವೂ ದೇವೇಗೌಡರ ದೇಣಿಗೆ. ನೀವೂ ಅವರ ಸಾಮಾಜಿಕ ನ್ಯಾಯದ ಫಲ ಮತ್ತು ಫಲಾನುಭವಿ. ಸ್ವಜಾತಿ, ಕುಟುಂಬ ಎಂದು ಅವರು ಆವತ್ತೇ ಭಾವಿಸಿದ್ದಿದ್ದರೆ ನೀವು ಹಣಕಾಸು ಮಂತ್ರಿ ಆಗುವುದಿರಲಿ, ಅಟ್‌ಲೀಸ್ಟ್ ಒಂದು ನಿಗಮದ ಅಧ್ಯಕ್ಷಗಿರಿಯೂ ದಕ್ಕುತ್ತಿರಲಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಅಂದು ನಿಮ್ಮನ್ನು ಹಣಕಾಸು ಮಂತ್ರಿ ಮಾಡಲೇಬೇಕೆಂದು ಹಠತೊಟ್ಟ ಗೌಡರಿಗೆ ಅವತ್ತಿನ ಅವರ ಸಮಕಾಲೀನರು ನಿಮ್ಮ ಬಗ್ಗೆ ಏನೆಲ್ಲಾ ಗುಣಾವಗಾನ ಮಾಡಿ ಬಣ್ಣಿಸಿದ್ದರೆನ್ನುವುದು ನಿಮಗೆ ತಿಳಿದಿರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನೀವು ಪಟ್ಟಿ ಮಾಡಿರುವ ಒಕ್ಕಲಿಗ ನಾಯಕರ ಹೆಸರುಗಳನ್ನು ನೋಡಿದೆ. ಅವರ ಹೆಸರುಗಳನ್ನ ಉಲ್ಲೇಖಿಸಿ ಅವರನ್ನೂ ಅಪಹಾಸ್ಯ ಮಾಡಿದ್ದೀರಿ. ನೀವೂ ಅಪಹಾಸ್ಯಕ್ಕೆ ತುತ್ತಾಗಿದ್ದಲ್ಲದೆ, ನಗೆಪಾಟಲಿಗೀಡಾಗಿದ್ದೀರಿ. ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಆ 13 ಜನರ ಶೆಲ್ಟರ್ ಪಡೆದಿದ್ದೀರಿ, ಹಾಗಿದ್ದರೆ ಅವರೆಲ್ಲರೂ ದೇವೇಗೌಡರಿಂದ ಅಧಿಕಾರ ಅನುಭವಿಸಲೇ ಇಲ್ಲವೇ? ಅವರೆಲ್ಲರೂ ನಿಮ್ಮಂತೆಯೇ ದೇವೇಗೌಡರ ಶ್ರಮ, ತ್ಯಾಗದಿಂದ ಅಧಿಕಾರ ಉಂಡು, ಪೊಗದಸ್ತಾಗಿ ಬೆಳೆದು ಬೇಲಿ ಹಾರಿದವರು! ಎಂದು ಟೀಕಿಸಿದ್ದಾರೆ.
ಕುಟುಂಬವೇ ಮಿಗಿಲು ಎಂದು ಗೌಡರು ಭಾವಿಸಿದ್ದಿದ್ದರೆ ನೀವು ಸೇರಿದಂತೆ ಈ ಪಟ್ಟಿಯಲ್ಲಿನ ಒಬ್ಬರೂ ಶಾಸಕ, ಮಂತ್ರಿ, ಎಂಪಿಆಗುತ್ತಲೇ ಇರಲಿಲ್ಲ. ನೀವೆಲ್ಲರೂ ನೆರಳು ಕೊಟ್ಟ ವೃಕ್ಷಕ್ಕೆ ನಿರ್ದಯದಿಂದ ಕೊಡಲಿ ಹಾಕಿದಿರಿ. ಉಂಡು ಹೋದರಿ, ಕೊಂಡು ಹೋದರಿ! ನಿಮ್ಮ ಸ್ವಾರ್ಥಕ್ಕೆ ಜಾತಿ ಎಳೆದು ತಂದಂತೆ ಹಿರಿಯರಾದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಎಂ. ಕೃಷ್ಣ ಅವರನ್ನು ಏಕೆ ಎಳೆದು ತರುತ್ತೀರಿ? ಎಂದು ಕೇಳಿದ್ದಾರೆ.
ಕಾಂಗ್ರೆಸ್ ಮೆಟ್ಟಿಲತ್ತಲು ಕಾರಣರಾದ ಎಸ್.ಎಂ.ಕೃಷ್ಣರನ್ನು ಎಷ್ಟು ಕ್ರೂರವಾಗಿ ವಂಚಿಸಿದಿರೆನ್ನುವುದು ಗೊತ್ತಿದೆ. ರಾಜಕೀಯದ ಕಡೆಗಾಲದಲ್ಲಿ ಅವರನ್ನು ನೀವೆಷ್ಟು ತುಚ್ಛವಾಗಿ ನಡೆಸಿಕೊಂಡಿರಿ ಎನ್ನುವುದನ್ನು ಜನ ಮರೆತಿಲ್ಲ. ಅನ್ ಪಾಲಿಷ್ಡ್ ಡೈಮಂಡ್ ಕೃಷ್ಣರಿಗೆ ಚೂರಿ ಆಗಿದ್ದು ಎಲ್ಲರೂ ಬಲ್ಲರು ಎಂದಿದ್ದಾರೆ.
ವಿಧಾನಸೌಧ ಕಟ್ಟಿದ ಕೆಂಗಲ್ ಅವರಿಗೆ ನಿಮ್ಮ ನೆಹರು ಕೊಟ್ಟ ಕಿರುಕುಳ, ಮಾಡಿದ ಅಪಮಾನ ಅಷ್ಟಿಷ್ಟಾ? ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರಿಗೆ ಬೆನ್ನಿಗಿರಿದ ದೂರ್ತರು ಯಾರು? ಯಾವ ಪಕ್ಷದವರು? ಒಕ್ಕಲಿಗರನ್ನು ಸಿಎಂ ಮಾಡುವುದು ಕಾಂಗ್ರೆಸ್ಸೇ ಎನ್ನುವುದಾದರೆ, ತತ್‌ಕ್ಷಣಕ್ಕೇ ನೀವು ಕುರ್ಚಿ ಬಿಡಬೇಕಲ್ಲವೇ? ಒಕ್ಕಲಿಗರ ಮೇಲೆ ನಿಮ್ಮ ಪ್ರೀತಿ ಪ್ರದರ್ಶನಕ್ಕೆ ಇದು ಸಕಾಲ! ಎಂದು ಸವಾಲು ಹಾಕಿದ್ದಾರೆ.
ಒಕ್ಕಲಿಗ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡುವ ಕಾಂಗ್ರೆಸ್ ಉದಾರತೆಯನ್ನು ನಾನು ಸ್ವಾಗತಿಸುವೆ. ಈ ಉದಾರತೆ ನಿಮಗೂ ಬೇಕಲ್ಲವೇ? ಈಗ ನೀವು ಉದಾರತೆ ತೋರಬೇಕು. ಎರಡನೇ ಅವಧಿಗೆ ನೀವು ಸಿಎಂ ಆಗುವ ಮುನ್ನ ಅಗ್ರಿಮೆಂಟ್ ಆಗಿತ್ತಲ್ಲಾ, ಅದನ್ನು ಬಹಿರಂಗವಾಗಿ ಹೇಳುವ ಉದಾರತೆ ತೋರಿ. ದಿಲ್ಲಿಯಲ್ಲಿ ನಿಮ್ಮಿಬ್ಬರ ನಡುವೆ ಆಗಿದ್ದ ಆ ಅಗ್ರಿಮೆಂಟ್‌ಗೆ ಸಾಕ್ಷಿ ಆಗಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜಿವಾಲಾಗೆ ನಿಮ್ಮ ಸಾಮಾಜಿಕ ನ್ಯಾಯ, ಒಕ್ಕಲಿಗ ಪ್ರೀತಿಯ ಪರಾಕಾಷ್ಠೆ ಈಗೀಗ ಅರ್ಥವಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ನ್ಯಾಯದ ಸಂಹಾರಿಯೇ ಅದೇ ಸಾಮಾಜಿಕ ನ್ಯಾಯ ಬಗ್ಗೆ ಪದೇಪದೆ ಮಾತನಾಡುವುದು ಅಸಹ್ಯ ತರಿಸುತ್ತದೆ. ನಿಮ್ಮ ಸಾಮಾಜಿಕ ನ್ಯಾಯಕ್ಕೆ ಅಂತಃಕರಣವಿಲ್ಲ. ಇದ್ದಿದ್ದರೆ ನಿಮಗಿಂತ ಮೊದಲೇ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬೇಕಿತ್ತು. ಇದ್ದ ಪ್ರತಿಪಕ್ಷ ಸ್ಥಾನವನ್ನೂ ಕಿತ್ತುಕೊಂಡು ಅವರನ್ನು ಅತ್ಯಂತ ಅಪಮಾನಕರವಾಗಿ ದಿಲ್ಲಿಗೆ ಓಡಿಸಿದಿರಿ. ಇನ್ನೊಬ್ಬ ದಲಿತ ನಾಯಕ ಡಾ. ಜಿ. ಪರಮೇಶ್ವರ್ ಅವರನ್ನು ನಿಮ್ಮ ದಾರಿಗೆ ಅಡ್ಡ ಬರುತ್ತಾರೆಂದು ಚುನಾವಣೆ ಕಣದಲ್ಲೇ ಮುಗಿಸಿದಿರಿ, ನಿಮ್ಮನ್ನು ಕಾಂಗ್ರೆಸ್ಸಿಗೆ ಕರೆತಂದ ಹೆಚ್. ವಿಶ್ವನಾಥ್‌ರನ್ನು ಎಲ್ಲಿ ಇಟ್ಟಿದ್ದೀರಿ? ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.
ಅಸಲಿಗೆ ಅಹಿಂದಾ ನಾಯಕ, ಸಾಮಾಜಿಕ ನ್ಯಾಯದ ಪ್ರತಿನಿಧಿಯೇ ನೀವಾಗಿದ್ದಿದ್ದರೆ ಈ ಸೂಕ್ಷ್ಮ ಸಂದರ್ಭದಲ್ಲಿ ನೀವು ಹುಟ್ಟಿದ ಜಾತಿಯನ್ನು ಎಳೆದು ತರುತ್ತಿರಲಿಲ್ಲ. ಇದನ್ನೇ ನಾನು ಪ್ರಶ್ನಿಸಿದ್ದು. ಬಸವಣ್ಣ, ನಾರಾಯಣ ಗುರು, ಕುವೆಂಪು, ದೇವರಾಜ ಅರಸು ಅವರುಗಳ ವಿಚಾರ, ತತ್ವಾದರ್ಶಗಳನ್ನು ನಂಬಿದನು ಎನ್ನುವ ನೀವು, ಇನ್ನು ಮುಂದೆ ಆ ಮಹನೀಯರ ಹೆಸರೇಳಬೇಡಿ. ನಿಮಗಿಂತ ವಯಸ್ಸಿನಲ್ಲಿ ಚಿಕ್ಕವನಾದ ನಾನು ನಿಮಗೆ ನೀಡುವ ವಿನಮ್ರ ಸಲಹೆ ಇದು ಎಂದು ಎಚ್ಡಿಕೆ ಹೇಳಿದ್ದಾರೆ.

*ಎರಡು ಸಲ ನೀವು ಸಿಎಂ ಆಗಿದ್ದಲ್ಲ, ಅರ್ಹತೆಯಿಂದ ಆಗಿದ್ದೂ ಅಲ್ಲವೇ ಅಲ್ಲ. ಪಕ್ಷದಲ್ಲಿದ್ದ ಸಮರ್ಥರನ್ನು ಸಾಮಾಜಿಕ ನ್ಯಾಯದ ನೆಪಲ್ಲಿ ರಾಜಕೀಯ ನರಮೇಧ ಮಾಡಿ ಆಕ್ರಮಿಸಿದ್ದು. ಇನ್ನೆಷ್ಟು ಸುಳ್ಳು ಹೇಳುತ್ತೀರಿ? ಇನ್ನೆಷ್ಟು ದಿನ ಈ ಊಸರವಳ್ಳಿ ಅವತಾರ?

- ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ