ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ
ಹಾಸನ: ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ(Chennamma funeral) ಸೋಮವಾರ ಸಂಜೆ ಹುಟ್ಟೂರು ಹಾಸನ ಜಿಲ್ಲೆಯಲ್ಲಿ ನೇರವೇರಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆದಿದೆ. ಗಾಳಿಯಲ್ಲಿ ಮೂರು ಬಾರಿ ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು. ಒಕ್ಕಲಿಗ ಸಂಪ್ರದಾಯದ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು. ಕಿರಿಯ ಪುತ್ರ ಹೆಚ್.ಡಿ.ರಮೇಶ್ ವಿಧಿ ವಿಧಾನ ನೇರವೇರಿಸಿದರು.
ಅಂತ್ಯಕ್ರಿಯೆಗೂ ಮುನ್ನ ಪುತ್ರ ಮಾಜಿ ಸಿಎಂ ಮತ್ತು ಹಾಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ರೇವಣ್ಣ ಸೇರಿ ಕುಟುಂಬಸ್ಥರು ಅಂತಿಮ ವಿಧಿವಿಧಾನ ನೇರವೇರಿಸಿದರು. ಇದೇ ವೇಳೆ ತಾಯಿಯ ಹಣೆಗೆ ಮುತ್ತಿಟ್ಟು ರೇವಣ್ಣ ಕಣ್ಣೀರಿಟ್ಟರು. ಪತ್ನಿಯ ಪಾರ್ಥಿವ ಶರೀರಕ್ಕೆ ಹೂಗುಚ್ಚ ನೀಡಿ ಹೆಚ್.ಡಿ.ದೇವೇಗೌಡರು ಭಾವುಕರಾದರು.
ಅಂತ್ಯಕ್ರಿಯೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ, ಶಿವರಾಜ್ ಸಿಂಗ್ ಚೌಹಾಣ್, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ರಾಘವೇಂದ್ರ ಸೇರಿದಂತೆ ರಾಜ್ಯದ ಸಚಿವರು, ಶಾಸಕರು, ಒಕ್ಕಲಿಗ ಸಮುದಾಯದ ಮಠಾಧೀಶರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗಿದ್ದರು.