ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ  
ರಾಜ್ಯ

ಮಾವು, ಹಲಸು ಮೇಳಕ್ಕೆ ಎಚ್‌ಡಿಡಿ ಭೇಟಿ: ಬೆಂಬಲ ಬೆಳೆ ಕೊಡಿಸುವಂತೆ ರೈತರು ಮನವಿ-HDD

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರುವ ಮಾವು ಮತ್ತು ಹಲಸಿನ ಮೇಳಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾನುವಾರ ಭೇಟಿ ನೀಡಿ ನೀಡಿದರು.
ತಮ್ಮ ಇಳಿ ವಯಸ್ಸಿನಲ್ಲೂ ವ್ಹೀಲ್ ಚೇರ್‌ನಲ್ಲಿ ಮೇಳಕ್ಕೆ ಭೇಟಿ ನೀಡಿದ ಗೌಡರು, ಉತ್ಸಾಹದಿಂದ ಮಳಿಗೆಗಳಿಗೆ ತೆರಳಿ ವಿವಿಧ ತಳಿಗಳ ಮಾವು, ಹಲಸುಗಳನ್ನು ವೀಕ್ಷಿಸಿದರು. ಮಾರಾಟಗಾರರಿಂದ ಇವುಗಳ ಬಗ್ಗೆ ಮಾಹಿತಿ ಪಡೆದರು. ಹಣ್ಣುಗಳನ್ನು ತಮ್ಮ ಕೈಯಾರೆ ಮುಟ್ಟಿ ಪರಿಶೀಲಿಸಿದರು. ಮಳಿಗೆಗಳನ್ನು ವೀಕ್ಷಿಸಿ ನೈಸರ್ಗಿಕವಾಗಿ ಬೆಳೆದ ಮಾವಿನ ಹಣ್ಣುಗಳನ್ನು ಸವಿದರು. ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸಿ, ಅವರ ಶ್ರಮವನ್ನು ಕೊಂಡಾಡಿದರು. ಈ ವೇಳೆ ರೈತರ ಸಮಸ್ಯೆಗಳನ್ನು ಆಲಿಸಿದರು.
ಮಾರುಕಟ್ಟೆಯಲ್ಲಿ ಹಣ್ಣುಗಳ ದರ, ವ್ಯಾಪಾರ, ಜನರಪ್ರತಿಕ್ರಿಯೆ ಕುರಿತು ವಿಚಾರಿಸಿದರು.ಮೇಳಕ್ಕೆ ದೇವೇಗೌಡರ ಆಗಮನದಿಂದ ಸಂತಸಗೊಂಡ ರೈತರು, ಮಾವು ಮತ್ತು ಹಲಸಿನ ಹಣ್ಣಿನ ಬೆಳೆಗೆ ಬೆಂಬಲ ಕೊಡಿಸುವಂತೆ ಮನವಿ ಮಾಡಿದರು. ನೀವು ಮಾತ್ರ ರೈತರ ಸಮಸ್ಯೆ ಬಗೆಹರಿಸಲು ಸಾಧ್ಯ. ಹೀಗಾಗಿ, ನೀವು ಸರ್ಕಾರಿ ಅಧಿಕಾರಿಗಳೊಂದಿಗೆ ಮಾತನಾಡಿ ಎಂದು ಕೇಳಿಕೊಂಡರು.
ನಮ್ಮ ರೈತರು ಹಂತ ಹಂತವಾಗಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ರೈತನ ಮಗನಾಗಿ ನಾನು ಶಾಸಕ, ವಿರೋಧ ಪಕ್ಷದ ನಾಯಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿದ್ದೇನೆ. ರೈತರು ಬೆಳೆದ ಹಣ್ಣುಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಸರ್ಕಾರ ಸಹಕಾರ ನೀಡಬೇಕು. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆ ಗಮನಹರಿಸಬೇಕು ಎಂದು ಎಂದು ಎಚ್‌ಡಿಡಿ ಒತ್ತಾಯಿಸಿದರು.
ಹಲಸು ಮಂಡಳಿ ರಚನೆಗೆ ಮನವಿ:
ಹಲಸು ಮತ್ತು ಹುಣಸೆ ಬೋರ್ಡ್ ರಚನೆಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈ ಬಗ್ಗೆ ಸಂಸತ್ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೇನೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ಗೆ ಮನವಿ ಸಲ್ಲಿಸಿದ್ದೇವೆ. ಹಲಸು ಮಂಡಳಿ ಮಾಡುವುದರಿಂದ ದಕ್ಷಿಣ ಭಾರತದ ರೈತರಿಗೆ ಅನುಕೂಲವಾಗುತ್ತದೆ. ಈ ಮೇಳದಿಂದ ಮನೆಗೆ ಹೋದ ಬಳಿಕ ಮತ್ತೊಮ್ಮೆ ಕೇಂದ್ರ ಕೃಷಿ ಸಚಿವರೊಂದಿಗೆ ಮಾನಾಡುತ್ತೇನೆ ಎಂದು ದೇವೇಗೌಡ ಹೇಳಿದರು. ರಾಜ್ಯಸಭೆಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸುವಿರಾ ಎಂಬ ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಎಚ್‌ಡಿಡಿ, ಮೇಳಕ್ಕೆ ಬಂದಿದ್ದೇನೆ. ಈಗ ರಾಜಕೀಯ ಮಾತನಾಡುವುದಿಲ್ಲ. ನಾನೇ ಖುದ್ದು ನಿಮ್ಮನ್ನು ಕಚೇರಿಗೆ ಕರೆದು ರಾಜಕೀಯ ವಿಚಾರಗಳ ಬಗ್ಗೆ ಮಾತನಾಡುವುದಾಗಿ ಪ್ರತಿಕ್ರಿಯಿಸಿದರು.
ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಾ.ಎಂ ಜಗದೀಶ್, ಕೋಲಾರ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ ,ಚಿಕ್ಕಬಳ್ಳಾಪುರದ ಮಾವು ಬೆಳೆಗಾರರ ಸಂಘದ ಅಧ್ಯಕ್ಷರು ಸೇರಿ ನೂರಾರು ರೈತರು ಉಪಸ್ಥಿತರಿದ್ದರು.