ಸಿಎಂ ಡಿಕೆ ಶಿವಕುಮಾರ್​, ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ 
ರಾಜ್ಯ

ವಿಧಾನಸೌಧದಲ್ಲಿ ತಾರ್ಕಿಕ ಅಂತ್ಯ ‌ಸಿಗಲ್ಲ! ಭೈರಮಂಗಲಕ್ಕೆ ಬನ್ನಿ, ರೈತರ ಮುಂದೆಯೇ ಚರ್ಚೆ ಮಾಡೋಣ: ಎಚ್​ಡಿಕೆ

ಪ್ರಮುಖ ಮುಖ್ಯಾಂಶಗಳು

  • ದಿನದಿಂದ ದಿನಕ್ಕೆ ತಾರಕಕ್ಕೇರಿದ ಬಿಡದಿ ಟೌನ್​ಶಿಪ್​ ವಿವಾದ
  • ಸಿಎಂ ಆಹ್ವಾನ ಪತ್ರಕ್ಕೆ ಉತ್ತರಿಸಿದ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ
  • ಭೈರಮಂಗಲಕ್ಕೆ ಬನ್ನಿ, ರೈತರ ಜೊತೆ ನೇರಾನೇರ ಚರ್ಚಿಸೋಣ ಎಂದ ಎಚ್​ಡಿಕೆ
ಬೆಂಗಳೂರು: ಬಿಡದಿ ಟೌನ್​ಶಿಪ್​ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಸಿಎಂ ಡಿಕೆ ಶಿವಕುಮಾರ್​ ಮತ್ತು ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ನಡುವಿನ ಮಾತಿನ ಸಮರ ಮತ್ತೆ ಮುಂದುವರಿದಿದೆ. ಟೌನ್​ಶಿಪ್​ ವಿಚಾರಕ್ಕೆ ಸಂಬಂಧಿಸಿದಂತೆ ಐದು ಪ್ರತಿನಿಧಿಗಳೊಂದಿಗೆ ವಿಧಾನಸೌಧಕ್ಕೆ ಬನ್ನಿ ಎಂದು ಪಂಥಾಹ್ವಾನ ನೀಡಿದ್ದ ಡಿಕೆಶಿಗೆ ಇದೀಗ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಸವಾಲಿಗೆ ಪ್ರತಿ ಸವಾಲಿನ ಪ್ರಶ್ನೆ ಅಲ್ಲ. ಪಂಥಾಹ್ವಾನದ ಪ್ರಶ್ನೆಯೂ ಅಲ್ಲ. ಈಗಾಗಲೇ ಈಗಿನ ಸರ್ಕಾರದಲ್ಲಿ ರೈತರ ಅಭಿಪ್ರಾಯಗಳ ವಿರುದ್ದವಾಗಿ ಹೋಗುತ್ತಿದ್ದಾರೆ. ಕೃಷಿಕರ ಭೂಸ್ವಾಧೀನ ಮಾಡಿ, ಕೈಗಾರಿಕೆ, ಎಐ ಸಿಟಿ ಸ್ಥಾಪನೆ ಮಾಡಲು ಹೊರಟಿದ್ದಾರೆ. ರೈತರು 450 ದಿನಗಳಿಂದ ಈ ಯೋಜನೆಯನ್ನು ವಿರೋಧಿಸಿ, ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರ ಶೇ.80ರಷ್ಟು ಜನ ಒಪ್ಪಿದೆ ಎನ್ನುತ್ತೆ. ಆದರೆ, ರೈತರು ಶೇ.70ರಿಂದ 80ರಷ್ಟು ನಾವು ಒಪ್ಪಿಗೆ ಸೂಚಿಸಿಲ್ಲ ಅಂತಾರೆ. ಹಲವಾರು ರೀತಿಯ ಗೊಂದಲಗಳು ಸೃಷ್ಟಿಯಾಗಿವೆ. ಸಿಎಂ ಅವರು ನನ್ನ ಮೇಲೆ ಆರೋಪ ಮಾಡಿದ್ದಾರೆ. ವಿಧಾನಸೌಧಕ್ಕೆ ಬನ್ನಿ ಅಂತಲೂ ‌ಪತ್ರ ಬರೆದಿದ್ದಾರೆ. ವಿಧಾನಸೌಧದಲ್ಲಿ ಮೂರ್ನಾಲ್ಕು ಜ‌ನ ಕೂತು ಮಾತಾಡುವುದರಲ್ಲಿ ಅರ್ಥವಿಲ್ಲ ಎಂದರು.
5 ಪ್ರತಿನಿಧಿಗಳ ಜೊತೆ ಬನ್ನಿ ಎಂದಿದ್ದಾರೆ. ಇಲ್ಲಿ ನಾನೇನೂ ತಂಡ ಕಟ್ಟಿಕೊಂಡಿಲ್ಲ. ತಂಡ ಅವರಲ್ಲಿ ಇರಬಹುದೇ ಹೊರತು ನಮ್ಮಲ್ಲಿ ಅಲ್ಲ. ನನ್ನದು ಒಂದೇ ತಂಡ, ಅದು ರೈತರ ತಂಡ. ವಿಧಾನಸೌಧದಲ್ಲಿ ಚರ್ಚೆ ಮಾಡಿದರೆ ತಾರ್ಕಿಕ ಅಂತ್ಯ ಸಿಗುವುದಿಲ್ಲ. ನೇರವಾಗಿ ರೈತರ ಸಮ್ಮುಖದಲ್ಲಿ ಸಭೆ ಮಾಡೋಣ. ಭೂಮಿ ಕಳೆದುಕೊಳ್ಳುವರು, ಯೋಜನೆಯಿಂದ ಸಮಸ್ಯೆ ಆದವರ ಜೊತೆ ನೇರಾನೇರ ಚರ್ಚೆ ಮಾಡಿದ್ರೆ, ಎಲ್ಲವೂ ಬಗೆಹರಿದು ಹೋಗುತ್ತೆ ಎಂದು ಹೇಳಿದರು.
ಯಾರಿಂದ ಆಯ್ತು, ಯಾಕಾಯ್ತು, ಈಗ ಯಾಕೆ ಪ್ರಾರಂಭ ಆಗಿದೆ ಅನ್ನೋದು ವಿಷಯವಲ್ಲ. ರೈತರು ಭೂಮಿ ಕೊಡುವುದಿಲ್ಲ ಎಂದು ಹೇಳಿದ್ದಾರೆ. ರೈತರ ಪರವಾಗಿ ಧ್ವನಿ ಎತ್ತಿದ್ದೇನೆ ಅಷ್ಟೇ. ಯಾವುದೋ ಪ್ರತಿಷ್ಠೆಗೆ, ಯಾರಿಗೋ ಹೆಸರು ಹಾಳ ಮಾಡಬೇಕು ಅನ್ನೋ ಉದ್ದೇಶವಿಲ್ಲ. ಸರ್ಕಾರ ಈ ಬಗ್ಗೆ ಗಂಭೀರವಾಗಿ ತೀರ್ಮಾನ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಸಿಎಂಗೆ ಪತ್ರ ಬರೆದಿದ್ದೇನೆ, ಅವರು ಏನು ಉತ್ತರ ಕೊಡ್ತಾರೋ ನೋಡೋಣ ಎಂದರು.