ಧಾರವಾಡ: ಚಲಿಸುತ್ತಿದ್ದ ಕಾರು ಅಪಘಾತಕ್ಕೆ ತುತ್ತಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಇದರ ಪರಿಣಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಲೋಕಾಯುಕ್ತ ಇನ್ಸ್ಪೆಕ್ಟರ್ ಪಿಎಸ್ ಸಾಲಿಮಠ ಅವರು ಸಜೀವ ದಹನವಾಗಿದ್ದಾರೆ. ಹುಬ್ಬಳ್ಳಿಯಿಂದ ಅಣ್ಣಿಗೇರಿ ಮಾರ್ಗವಾಗಿ ಗದಗಕ್ಕೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಹಾವೇರಿ ಲೋಕಾಯುಕ್ತದಲ್ಲಿ ಅಧಿಕಾರಿಯಾಗಿದ್ದ ಪಂಚಾಕ್ಷರಯ್ಯ ಸಾಲಿಮಠ ಅವರು ಕಾರಿನೊಳಗೆ ಇದ್ದ ಪರಿಣಾಮ, ಪಾರಾಗಲು ಸಾಧ್ಯವಾಗದೆ ಸುಟ್ಟು ಕರಕಲಾಗಿದ್ದಾರೆ. ಬೆಳಗಾವಿ ಜಿಲ್ಲೆ ಮುರಗೋಡ ಮೂಲದ ಪಂಚಾಕ್ಷರಯ್ಯ ಅವರ ಕುಟುಂಬದವರು ಗದಗನಲ್ಲಿದ್ದು, ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಅವರು ಕಾರು ಚಲಾಯಿಸಿಕೊಂಡು ಒಬ್ಬರೇ ಗದಗದ ಮಾರ್ಗದಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ದುರ್ಘಟನೆ ಸಂಭವಿಸಿದೆ.
ಕಾರ್‌ಗೆ ಬೆಂಕಿ ತಗುಲಿದ ಕೂಡಲೇ ಡೋರ್‌ಗಳು ತಕ್ಷಣವೇ ಲಾಕ್ ಆಗಿದ್ದರಿಂದ ಹೊರಬರಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ಕಾರು ಏಕಾಏಕಿ ಹೊತ್ತಿ ಉರಿದಿದ್ದರಿಂದ ಸ್ಥಳೀಯರ ಪ್ರಯತ್ನವು ವಿಫಲವಾಗಿದೆ. ಘಟನೆಗೆ ನಿಖರ ಕಾರಣವೇನು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಪ್ರಕರಣ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತ ಪಂಚಾಕ್ಷರಯ್ಯ ಸಾಲಿಮಠ ಅವರ ದೇಹ ಗುರುತು ಸಿಗದಷ್ಟು ಸುಟ್ಟುಹೋಗಿದ್ದು, ಅವರು ಕೈಯಲ್ಲಿ ಧರಿಸಿದ್ದ ಬ್ರೆಸ್‌ಲೆಟ್ ಮತ್ತು ಕೊರಳಲ್ಲಿದ್ದ ಚಿನ್ನದ ಚೈನ್ ಅನ್ನು ಸಂಬಂಧಿಕರು ಗುರುತಿಸಿದ್ದಾರೆ. ಸ್ಥಳಕ್ಕೆ ಎಸ್.ಪಿ ಗುಂಜನ್ ಆರ್ಯ ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ.