ಮುಧೋಳ ಕಸಾಪ ಭವನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2026ರಲ್ಲಿ ಶಾಲಾವಾರು ಪ್ರಥಮ ಸ್ಥಾನ ಪಡೆದ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ.ಚಿಕ್ಕಪ್ಪ ನಾಯಕ, ಎಸ್.ಎಂ.ಮುಲ್ಲಾ, ಲಕ್ಷ್ಮೀಕಾಂತ ಮಮದಾಪುರ, ಆನಂದ ಪೂಜಾರಿ, ಸಂಗಮೇಶ ನೀಲಗುಂದ, ರಮೇಶ ನಿಡೋಣಿ ಇತರರಿದ್ದರು.
- ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಅಭಿಮತ
- ಸರ್ಕಾರಿ ಪ್ರೌಢ ಶಾಲೆಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಮುಧೋಳ: ಶೈಕ್ಷಣಿಕ ಸಾಧನೆಗೆ ಯಾವುದೇ ಮಿತಿಯಿಲ್ಲ, ಬದ್ಧತೆ ಮತ್ತು ಕಠಿಣ ಪರಿಶ್ರಮವಿದ್ದರೆ ಎಂತಹ ಗುರಿಯನ್ನಾದರೂ ತಲುಪಬಹುದು. ವಿದ್ಯಾರ್ಥಿಗಳ ಈ ಯಶಸ್ಸು ಇಡಿ ತಾಲೂಕಿಗೆ ಹೆಮ್ಮೆ ತಂದಿದೆ ಎಂದು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಬಣ್ಣಿಸಿದರು.
ನಗರದ ಕಸಾಪ ಸಭಾಭವನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2026ರಲ್ಲಿ ಶಾಲಾವಾರು ಪ್ರಥಮ ಸ್ಥಾನ ಪಡೆದ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಬದಲಾವಣೆಗೆ ಶಿಕ್ಷಣವೇ ಮೂಲ ಮಂತ್ರ. ವಿದ್ಯಾರ್ಥಿಗಳು ಭವ್ಯ ಭಾರತದ ನಿರ್ಮಾತೃಗಳು. ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಹಿಂದೆ ಶಿಕ್ಷಕರು ಮತ್ತು ಪಾಲಕರ ಶ್ರಮ ಅಪಾರವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಅಂಕಗಳಿಸುವುದು ಮಾತ್ರವಲ್ಲ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಶುಭ ಹಾರೈಸಿದರು. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಐ. ಅಂಬಿಗೇರ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜಿ. ತಿಪ್ಪರೆಡ್ಡಿ, ಕಸಾಪ ಅಧ್ಯಕ್ಷ ಆನಂದ ಪೂಜಾರಿ, ಸಂಗಮೇಶ ನೀಲಗುಂದ, ರಮೇಶ ನಿಡೋಣಿ, ಪ್ರೌಢ ಶಾಲಾ ಜಿಲ್ಲಾ ಮುಖ್ಯ ಕಾರ್ಯದರ್ಶಿ ಮಹಾಂತೇಶ ಕೋಟಿ, ಶ್ರೀಶೈಲ ಕುರಣಿ, ಲಕ್ಷ್ಮೀಕಾಂತ ಮಮದಾಪುರ, ಪರುಶರಾಮ ಬಗಲಿ, ಎ.ವೈ. ಲಂಗೋಟಿ, ಸೋಮು ಮೆಟಗುಡ್ಡ, ಎಸ್.ಕೆ. ಸತ್ತಿಗೇರ, ಜಿ.ಎಚ್. ಹಂಚನಾಳ ಇತರರಿದ್ದರು.