ಕಲಬುರಗಿ ಆರ್​.ಜೆ ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಸಿಪಿಐ ರಾವೇಂದ್ರ ಭಜಂತ್ರಿ ಉದ್ಘಾಟಿಸಿದರು. ಡಾ.ಪ್ರಹ್ಲಾದ್​ ಭುರ್ಲಿ, ಚಂದ್ರಶೇಖರ ದೊಡ್ಡಮನಿ, ಪ್ರಕಾಶ ಚವ್ಹಾಣ್​ ಇತರರಿದ್ದರು. 
ರಾಜ್ಯ

ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಡಾ.ಭುರ್ಲಿ ಪ್ರಹ್ಲಾದ್​ ಅನಿಸಿಕೆ
  • ಆರ್​ಜೆ ಪಿಯು ಕಾಲೇಜಿನಲ್ಲಿ ವಿಚಾರ ಸಂಕಿರಣ
ಕಲಬುರಗಿ: ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು. ಕಠಿಣ ಪರಿಶ್ರಮ ಅಗತ್ಯ ಎಂದು ಆರ್​.ಜೆ. ಪಿಯು ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ಭುರ್ಲಿ ಪ್ರಹ್ಲಾದ್​ ಹೇಳಿದರು.
ನಗರದ ರಮಾಬಾಯಿ ಜಹಾಗೀರದಾರ್​ (ಆರ್​ಜೆ) ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಡಿ ಶನಿವಾರ ಏರ್ಪಡಿಸಿದ್ದ ಸೈಬರ್​ ಮತ್ತು ಪೋಕ್ಸೊದಲ್ಲಿನ ಇತ್ತೀಚಿನ ಪ್ರವೃತ್ತಿ ಕುರಿತ ವಿಚಾರ ಸಂಕಿರಣ, 2026&27ರ ಎನ್​ಎಸ್​ಎಸ್​ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಸುಂದರ ಹೂವುಗಳು ಬಾಡಬಾರದು. ಶಿಕ್ಷಕರು, ಪಾಲಕರು ಬೈದರೆ ಬೇಜಾರು ಮಾಡಿಕೊಳ್ಳದೆ ಆಶೀರ್ವಾದ ಎಂದು ಭಾವಿಸಿದರೆ ಬದುಕು ಸುಂದರವಾಗಲಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಿಪಿಐ ರಾವೇಂದ್ರ ಭಜಂತ್ರಿ ಮಾತನಾಡಿ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಬಂದ ನಂತರ ಚಿಕ್ಕ ಮಕ್ಕಳು ನಿರ್ಭಯವಾಗಿ ಓಡಾಡಲು ಸಾಧ್ಯವಾಗಿದೆ. ಅಪರಾಧ ತಡೆಗೆ ಪೊಲೀಸ್​ ಇಲಾಖೆ ದಿನದ 24 ಗಂಟೆ ಕೆಲಸ ಮಾಡುತ್ತಿದೆ. ಸುಂದರವಾದ ಬದುಕನ್ನು ಯಾವ ಕಾರಣಕ್ಕೂ ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಡಾ.ಚಂದ್ರಶೇಖರ ದೊಡ್ಡಮನಿ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸ್ವಚ್ಛತೆ, ಗ್ರಾಮೋದ್ಧಾರ, ಸಮಾಜಮುಖಿ ಕಾರ್ಯ ಕೈಗೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮ ಅಧಿಕಾರಿ ಪ್ರಕಾಶ ಚವ್ಹಾಣ್​ ಇದ್ದರು. ಮಳೇಂದ್ರ ಹಿರೇಮಠ ನಿರೂಪಣೆ ಮಾಡಿದರು.