ಔರಾದ್ನ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿ ಪ್ರತಿನಿಧಿಗಳ ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಸಿಪಿಐ ರಘುವೀರ್ ಸಿಂಗ್ ಠಾಕೂರ್, ನಾನಕ ಝಿರಾ ಸಾಹೇಬ್ ಫೌಂಡೇಷನ್ ಅಧ್ಯಕ್ಷ ಡಾ. ಎಲ್.ಬಲಬೀರ್ ಸಿಂಗ್ ರೇಷ್ಮಾ ಕೌರ್, ಪ್ರಾಂಶುಪಾಲೆ ದೀನಾ ಜ್ಯೋತಿ ಇತರರಿದ್ದರು.
- ಸಿಪಿಐ ರಾಘುವೀರಸಿಂಗ್ ಠಾಕೂರ್ ಅಭಿಮತ
- ಔರಾದ್ನಲ್ಲಿ ಪ್ರತಿಜ್ಞಾ ಸ್ವೀಕಾರ ಸಮಾರಂಭ
ಔರಾದ್: ಮುಂದಿನ ದಿನಗಳಲ್ಲಿ ದೇಶದ ಸೇವೆಗೆ ಸದಾ ಸಿದ್ಧರಾಗಬೇಕು. ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಬೇಕಾದರೆ ಈಗಿನಿಂದಲೇ ಕಠಿಣ ಪರಿಶ್ರಮ ಆರಂಭಿಸಬೇಕು ಎಂದು ಸಿಪಿಐ ರಾಘುವೀರಸಿಂಗ್ ಠಾಕೂರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿ ಪ್ರತಿನಿಧಿಗಳ ಪ್ರತಿಜ್ಞಾ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದು, ಉತ್ತಮ ಪ್ರಜೆಗಳಾಗಲು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಸದಾ ಸಿದ್ಧರಾಗಿರಬೇಕು ಎಂದು ತಿಳಿಸಿದರು.
ಎಲ್ಲ ಜೀವರಾಶಿಗಳು ಆರೋಗ್ಯಕರವಾಗಿ ಬದುಕಲು ಶುದ್ಧ ಗಾಳಿ, ನೀರು ಮತ್ತು ಮಣ್ಣು ಅಗತ್ಯವಾಗಿವೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಿ ಹೆಚ್ಚು ಗಿಡಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ರೇಷ್ಮಾ ಕೌರ್ ಮಾತನಾಡಿ, ವಿದ್ಯಾರ್ಥಿಗಳು ಶ್ರಮಜೀವಿಗಳಾಗಿ ಉತ್ತಮ ಗುರಿಯನ್ನು ಹೊಂದಿರಬೇಕು. ಗುರಿಯಿಲ್ಲದೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಪಾಲಕರ ಕನಸು ನನಸಾಗುವಂತೆ ಉತ್ತಮವಾಗಿ ಅಭ್ಯಾಸ ಮಾಡಬೇಕು. ಶಿಸ್ತಿನ ಜೀವನ ನಡೆಸುವುದರೊಂದಿಗೆ ಪರೋಪಕಾರದ ಮನೋಭಾವ ಬೆಳೆಸಿಕೊಳ್ಳಬೇಕು. ಅಲ್ಲದೆ, ಓದುವ ಹವ್ಯಾಸ ರೂಢಿಸಿಕೊಳ್ಳಬೇಕು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಗುರು-ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾನಕ ಝಿರಾ ಸಾಹೇಬ್ ಫೌಂಡೇಷನ್ ಅಧ್ಯಕ್ಷ ಡಾ.ಎಲ್.ಬಲಬೀರ್ ಸಿಂಗ್ ಹಾಗೂ ಪ್ರಾಂಶುಪಾಲೆ ದೀನಾ ಜ್ಯೋತಿ, ಶಾಲೆಯ ಮಕ್ಕಳು ಮತ್ತು ಸಿಬ್ಬಂದಿ ಇದ್ದರು.