ರಾಜ್ಯ ಸರ್ಕಾರದಿಂದ ರಾಷ್ಟ್ರೀಯ ಬಸವ ಪುರಸ್ಕಾರ ಪಡೆದ ಶ್ರೀ ಡಾ.ಸಿದ್ದರಾಮ ಬೆಲ್ದಾಳ ಶರಣರನ್ನು ಬಸವಕಲ್ಯಾಣ ತಾಲೂಕಿನ ಹಾರಕೂಡ ಮಠದಲ್ಲಿ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸೋಮವಾರ ಸತ್ಕರಿಸಿ ಗೌರವಿಸಿದ್ದರು. ಮಲ್ಲಿನಾಥ ಹಿರೇಮಠ, ಸಂಗಣ್ಣ ಪಾಟೀಲ್, ರಾಜಶೇಖರ ಹೊಗತಾಪುರೆ, ವಿಜಯಕುಮಾರ ಸಂಗೋಳಗೆ ಇತರರಿದ್ದರು
- ಡಾ.ಸಿದ್ದರಾಮ ಬೆಲ್ದಾಳ ಶರಣರು ನುಡಿ
- ಚನ್ನವಿರ ಶಿವಾಚಾರ್ಯರಿಂದ ಸತ್ಕಾರ ಕಾರ್ಯಕ್ರಮ
ಬಸವಕಲ್ಯಾಣ: ಹಾರಕೂಡ ಹಿರೇಮಠ ಎಲ್ಲ ಸಮುದಾಯದ ಭಕ್ತರಿಗೆ ಸಮನ್ವಯ ತೊಟ್ಟಿಲಿನಂತಿದೆ ಎಂದು ಡಾ.ಸಿದ್ದರಾಮ ಬೆಲ್ದಾಳ ಶರಣರು ನುಡಿದರು.
ಕರ್ನಾಟಕ ಸರ್ಕಾರದಿಂದ ರಾಷ್ಟ್ರೀಯ ಬಸವ ಪುರಸ್ಕಾರ ಪಡೆದ ಡಾ.ಸಿದ್ದರಾಮ ಬೆಲ್ದಾಳ ಶರಣರು ತಾಲೂಕಿನ ಹಾರಕೂಡ ಹಿರೇಮಠದಲ್ಲಿ ಡಾ.ಚನ್ನವಿರ ಶಿವಾಚಾರ್ಯರಿಂದ ಸೋಮವಾರ ಹಮ್ಮಿಕೊಂಡ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದ ಶರಣರು, ಹಾರಕೂಡ ಮಠ ಎಲ್ಲರಿಗೂ ತವರಿನ ಸ್ಪರ್ಶ ನೀಡುವ ಅದ್ಭುತ ವಾತ್ಸಲ್ಯದ ತಾಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನನ್ನ ಆಧ್ಯಾತ್ಮ ಪಯಣದ ಪ್ರಥಮದಲ್ಲಿ ಯೋಗ ಸಾಧನೆಗಾಗಿ ಪ್ರೇರಣೆ ನೀಡಿದವರು ಹಾರಕೂಡದ ಲಿಂ. ಚೆನ್ನಬಸವ ಶಿವಯೋಗಿಗಳು. ಅವರ ಪ್ರಸಾದ ವಾಣಿಯಿಂದ ಅದ್ಭುತ ಪವಾಡಗಳೇ ನಡೆದಿವೆ. ಅವರ ಸರಳ ಮತ್ತು ನಿರ್ಮೋಹ ಜೀವನ ಪಥ ಇಂದಿನ ಸಂತ ವರ್ಗಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಇಂದಿನ ಪೀಠಾಧಿಪತಿಗಳಾದ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಬಸವ ಚಿಂತನೆ ಮತ್ತು ಶರಣ ಸಂಸತಿಗೆ ನೀಡಿರುವ ಕೊಡುಗೆ ಅನನ್ಯ. ಹಾರಕೂಡ ಶ್ರೀಗಳಿಂದ ಸತ್ಕಾರ ಪಡೆದಿರುವುದು ನನಗೆ ತುಂಬಾ ಖುಷಿಯಾಗಿದ್ದು, ತವರಿನ ಸಂಭ್ರಮ ಅನುಭವಿಸಿದ್ದಂತಾಗಿದೆ ಎಂದು ನುಡಿದರು.
ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಂಗಣ್ಣ ಪಾಟೀಲ್, ರಾಜಶೇಖರ ಹೊಗತಾಪುರೆ, ವಿಜಯಕುಮಾರ ಸಂಗೋಳಗೆ ಇತರರಿದ್ದರು. ಮಲ್ಲಿನಾಥ ಹಿರೇಮಠ ಹಾರಕೂಡ ಸ್ವಾಗತಿಸಿದರು. ಕಾರ್ತಿಕ ಸ್ವಾಮಿ ಯಲದಗುಂಡಿ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು. ಅಂಬಾರಾಯ ಉಗಾಜಿ ನಿರೂಪಣೆ ಮಾಡಿದರು.