ಕೆರೆಯ ಒಳಗೆ ಆಳೆತ್ತರದ ಗಿಡಗಳು ಬೆಳೆದಿರುವುದು. 
ರಾಜ್ಯ

ಅರ್ಧಕ್ಕೆ ನಿಂತ ಹಾರಗದ್ದೆ ಕೆರೆ ಅಭಿವೃದ್ಧಿ / ANEKAL

ಬೆಂಗಳೂರು ಗ್ರಾಮಾಂತರ ಡೆಸ್ಕ್

ನವೀನ್​ ಶೆಟ್ಟಿ ಕೆರಾಡಿ, ಆನೇಕಲ್​

ಜಿಗಣಿ ಹೋಬಳಿ ಹಾರಗದ್ದೆ ಕೆರೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ನಿರ್ವಹಣೆ ಹಾಗೂ ಸಂರಕ್ಷಣೆ ಇಲ್ಲದ ಕಾರಣ ಕಸ ಸುರಿಯುವ ಹಾಟ್​ಸ್ಪಾಟ್​ ಆಗಿ ಬದಲಾಗುತ್ತಿದೆ. ಎಲ್ಲೆಡೆ ಗಿಡ&ಗಂಟಿ ಬೆಳೆದಿದೆ.

ಒಂದು ಕಾಲದಲ್ಲಿ ಸುತ್ತಮುತ್ತಲ ಪ್ರದೇಶದ ಜಲಮೂಲವಾಗಿದ್ದ ಹಾರಗದ್ದೆ ಕೆರೆ ಅಂತರ್ಜಲ ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಕೆರೆತುಂಬ ಮುಳ್ಳಿನ ಪೊದೆಗಳು ಬೆಳೆದಿವೆ. ಕಸದ ರಾಶಿ ಹಾಗೂ ಕೊಳಚೆ ನೀರಿನಿಂದ ತುಂಬಿಕೊಂಡಿದೆ.

ಕೆರೆಯ ಅಭಿವೃದ್ಧಿಗೆ 2017ರಲ್ಲಿ ಸರ್ಕಾರ ಅಂದಾಜು 6.17 ಕೋಟಿ ರೂ. ಮಂಜೂರು ಮಾಡಿದೆ. ವಿಧಾನ ಪರಿಷತ್​ಗೆ ಸಲ್ಲಿಸಿರುವ ಸರ್ಕಾರದ ದಾಖಲೆಯಲ್ಲಿಯೂ ಇದೇ ಅಂದಾಜು ವೆಚ್ಚವನ್ನು ಉಲ್ಲೇಖಿಸಲಾಗಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಕೆರೆ ಅಭಿವೃದ್ಧಿಗೆ ಮಂಜೂರು ಮಾಡಿದ್ದರೂ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಅನುಮಾನ ಮೂಡಿಸಿದೆ.

ಸಂಗ್ರಹಣಾ ಸಾಮರ್ಥ್ಯ ಕುಸಿತ: ಕೆರೆಯ ಬಹುಭಾಗದಲ್ಲಿ ಗಿಡ&ಗಂಟಿ ಬೆಳೆದು ನೀರಿನ ಹರಿವು ಹಾಗೂ ಸಂಗ್ರಹಣಾ ಸಾಮರ್ಥ್ಯ ಕುಸಿದಿದೆ. ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ.ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಕೆರೆ ಪರಿಸರಕ್ಕೆ ಅಪಾಯ ತಂದೊಡ್ಡಿದೆ.

ಹಾರಗದ್ದೆ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕೈಗಾರಿಕಾ ಚಟುವಟಿಕೆಗಳು ಹೆಚ್ಚಾಗಿದ್ದು, ಜಿಗಣಿ ಕೈಗಾರಿಕಾ ಪ್ರದೇಶದ ಸುತ್ತಮುತ್ತ ಹಲವಾರು ಗ್ರಾನೈಟ್​ ಮತ್ತು ಕಲ್ಲು ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಕೆಲ ಗ್ರಾನೈಟ್​ ಕಾರ್ಖಾನೆಗಳ ತ್ಯಾಜ್ಯ ನೀರು ಕೆರೆಗೆ ಸೇರುತ್ತಿದೆ ಎಂದು ಸ್ಥಳಿಯರು ಆರೋಪಿಸುತ್ತಿದ್ದು, ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆ ಜಲಮೂಲಗಳಿಗೆ ಹರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಹಾರಗದ್ದೆ ಕೆರೆ ಪರಿಸ್ಥಿತಿ ಬಗ್ಗೆ ಈ ಹಿಂದೆ ನಡೆದ ಜಲ ಅಧ್ಯಯನಗಳಲ್ಲೂ ಆತಂಕಕಾರಿ ಅಂಶಗಳು ದಾಖಲಾಗಿವೆ. ತಾಲೂಕಿನ ನೀರಿನ ಪರಿಸ್ಥಿತಿ ಕುರಿತಾದ ಅಧ್ಯಯನದಲ್ಲಿ ಹಾರಗದ್ದೆ ಕೆರೆಯನ್ನು ಪ್ರತ್ಯೇಕವಾಗಿ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇನ್ನೊಂದು ಜಲ ಸಂರಕ್ಷಣಾ ವರದಿಯಲ್ಲಿ ಹಾರಗದ್ದೆ ಸೇರಿ ಆನೇಕಲ್​ನ ಕೆರೆಗಳ ನೀರಿನ ಗುಣಮಟ್ಟದಲ್ಲಿ ಕೆಲ ಮಾನದಂಡಗಳು ಅನುಮತಿಸಲ್ಪಟ್ಟ ಮಿತಿಯನ್ನು ಮೀರಿರುವುದು ಹಾಗೂ ಹಲವು ಕೆರೆಗಳಿಗೆ ಕೈಗಾರಿಕಾ ತ್ಯಾಜ್ಯ ಮತ್ತು ಗೃಹಬಳಕೆಯ ಕೊಳಚೆ ನೀರಿನ ಹೊರಹರಿವುಗಳು ಸೂಕ್ತ ಪ್ರಾಥಮಿಕ ಸಂಸ್ಕರಣೆ ಇಲ್ಲದೆ ಸಂಪರ್ಕಗೊಂಡಿರುವುದನ್ನು ಉಲ್ಲೇಖಿಸಲಾಗಿದೆ. ಕೆರೆಗಳ ಸುತ್ತಮುತ್ತ ವ್ಯಾಪಕವಾಗಿ ಕಸ ಕಂಡುಬಂದಿರುವುದನ್ನೂ ವರದಿಯಲ್ಲಿ ದಾಖಲಿಸಲಾಗಿದೆ.

ಹಾರಗದ್ದೆ ಕೆರೆ ಸಂರಕ್ಷಣೆ ಕೇವಲ ಕೆರೆಯ ವಿಚಾರವಲ್ಲ. ಇದು ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ, ಕೃಷಿ, ಪರಿಸರ ಮತ್ತು ಭವಿಷ್ಯದ ನೀರಿನ ಭದ್ರತೆಗೆ ಸಂಬಂಧಿಸಿದ್ದು. ಗಿಡ&ಗಂಟಿ, ಕೊಳಚೆ ನೀರು ಹಾಗೂ ತ್ಯಾಜ್ಯದಿಂದ ಕೆರೆ ತುಂಬಿದರೆ ಮಳೆನೀರು ಸಂಗ್ರಹವಾಗದೆ ಬೇರೆಡೆ ಹರಿದುಹೋಗುವ ಸಾಧ್ಯತೆ ಹೆಚ್ಚು. ಮತ್ತೊಂದೆಡೆ ಕಲುಷಿತ ನೀರು ಅಂತರ್ಜಲಕ್ಕೆ ಸೇರುವ ಅಪಾಯವೂ ಇರುವುದರಿಂದ ಸುತ್ತಮುತ್ತಲಿನ ಬೋರ್​ವೆಲ್​ಗಳ ನೀರಿನ ಗುಣಮಟ್ಟದ ಮೇಲೂ ಪರಿಣಾಮ ಬೀರುವ ಆತಂಕವಿದೆ.

ಹಾರಗದ್ದೆ ಕೆರೆಯ ಇಂದಿನ ಸ್ಥಿತಿಯನ್ನು ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳಿಯ ಆಡಳಿತ ಜಂಟಿಯಾಗಿ ಪರಿಶೀಲಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್​ ಆನೇಕಲ್​ ತಾಲೂಕು ಅಧ್ಯಕ್ಷ ಆದೂರು ಪ್ರಕಾಶ್​ ಆಗ್ರಹಿಸಿದ್ದಾರೆ.

ಜಲಮೂಲಗಳು ಉಳಿಯಲಿ :

ಹಾರಗದ್ದೆ ಕೆರೆ ಮತ್ತಷ್ಟು ಹಾಳಾಗುವ ಮುನ್ನ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಕೆರೆಯ ಸಮಗ್ರ ಪುನಶ್ಚೇತನಕ್ಕೆ ವಿಶೇಷ ಯೋಜನೆ ರೂಪಿಸಬೇಕು. ಇಲ್ಲವಾದರೆ, ಇಂದು ಕೇವಲ ಒಂದು ಕೆರೆಯಾಗಿ ಕಾಣುತ್ತಿರುವ ಈ ಜಲಮೂಲ ನಾಳೆ ಆನೇಕಲ್​ ಭಾಗದ ನೀರಿನ ಭದ್ರತೆಯ ಮೇಲೆಯೇ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಆತಂಕ ಸ್ಥಳಿಯರಲ್ಲಿ ಮೂಡಿದೆ. ಈ ಕೆರೆ ಉಳಿಯಬೇಕು ಜನರ ಬಳಕೆಗೆ ಬರಬೇಕು ಎಂಬುದು ವಿಜಯವಾಣಿ ಕಳಕಳಿ.

ಕೆರೆಯ ಸರ್ವೇ ನಡೆಸಿ ಅದರ ಮೂಲ ವಿಸ್ತೀರ್ಣ ಮತ್ತು ಗಡಿ ಗುರುತಿಸುವುದು, ಒತ್ತುವರಿ ಇದ್ದರೆ ತೆರವುಗೊಳಿಸುವುದು, ಗಿಡ&ಗಂಟಿ ತೆರವುಗೊಳಿಸಿ ಹೂಳು ತೆಗೆಯುವುದು, ತ್ಯಾಜ್ಯ ತೆರವು, ಕೆರೆಗೆ ಸೇರುವ ಎಲ್ಲ ಒಳಹರಿವು ಕಾಲುವೆಗಳ ಪರಿಶೀಲನೆ ನಡೆಯಬೇಕು. ಕೈಗಾರಿಕಾ ತ್ಯಾಜ್ಯ ನೀರು ಸೇರುತ್ತಿದೆಯೇ ಎಂಬುದನ್ನು ನೀರಿನ ಮಾದರಿ ಪರೀಕ್ಷೆ ಮೂಲಕ ಪತ್ತೆಹಚ್ಚುವುದು ಅತ್ಯಂತ ಅಗತ್ಯವಾಗಿದೆ.

— > ಕೆ.ಎಸ್​.ನಟರಾಜ್​ ಮಾಜಿ ಅಧ್ಯಕ್ಷ, ಹಾರಗದ್ದೆ ಗ್ರಾಪಂ

ಕೆರೆಗೆ ಕೊಳಚೆ ನೀರು ಸೇರುವುದನ್ನು ಶಾಶ್ವತವಾಗಿ ತಡೆಯಲು ಸೂಕ್ತ ಎಸ್​ಟಿಪಿ ವ್ಯವಸ್ಥೆ ಕಲ್ಪಿಸಿ, ಮಳೆನೀರು ಕೆರೆಗೆ ಹರಿಯುವಂತೆ ಒಳಚರಂಡಿ ವ್ಯವಸ್ಥೆಯನ್ನು ಪ್ರತ್ಯೇಕಗೊಳಿಸಬೇಕು. ಕೆರೆಯನ್ನು ಉಳಿಸದೇ ಹೋದರೆ ಮುಂದಿನ ದಿನಗಳು ಕಠಿಣವಾಗುವುದರಲ್ಲಿ ಎರಡು ಮಾತಿಲ್ಲ.

— > ಕ್ಯಾಪ್ಟನ್​ ಸಂತೋಷ್​ ಮಾಜಿ ಸೈನಿಕ