ಹನುಮದ್ ವ್ರತದ ಅಂಗವಾಗಿ ಆಲೂರು ಕಸಬಾ ಹೋಬಳಿಯ ಬೈರಾಪುರದ ವೀರಾಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.  
ರಾಜ್ಯ

ಆಲೂರು ಭಾಗದಲ್ಲಿ ಹನುಮದ್ ವ್ರತ ಅದ್ದೂರಿ

ಆಲೂರು: ವಾಯುಪುತ್ರ ಹನುಮದ್ ವ್ರತವನ್ನು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿವಿಧೆಡೆ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಎಲ್ಲೆಡೆ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಭಜನೆ, ಸ್ಮರಣೆಯ ಕಾರ್ಯಕ್ರಮಗಳು ನಡೆದವು.

ಪಟ್ಟಣದ ಕೊನೆಪೇಟೆಯ ಹೌಸಿಂಗ್ ಬೋರ್ಡ್‌ನಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬೃಹತ್ ಹನುಮ ಮತ್ತು ಶ್ರೀರಾಮನ ಭಾವಚಿತ್ರದ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಆಲೂರು ಕೊನೇಪೇಟೆಯಿಂದ ಆರಂಭಗೊಂಡ ಮೆರವಣಿಗೆ ಕೆಇಬಿ ಸರ್ಕಲ್‌ನಲ್ಲಿರುವ ಸಂಗಮೇಶ್ವರ ದೇವಸ್ಥಾನದವರೆಗೂ ಸಾಗಿತು. ಮರವಣಿಗೆಯುದ್ದಕ್ಕೂ ಜೈ ಹನುಮಾನ್ ಎಂಬ ಘೋಷಣೆಗಳು ಮೊಳಗಿದವು. ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಮೆರವಣಿಗೆಯಲ್ಲಿದ್ದರು.

ವಿವಿಧೆಡೆ ಆಚರಣೆ:
ಕಸಬಾ ಹೋಬಳಿಯ ಆಲೂರು ಹೌಸಿಂಗ್ ಬೋರ್ಡ್ ವೀರಾಂಜನೇಯ ಸ್ವಾಮಿ, ಕೆಇಬಿ ವೃತ್ತದ ವಿದ್ಯುತ್ ಆಂಜನೇಯ, ದಡಹಳ್ಳಿಯ ಅಭಯ ಆಂಜನೇಯ, ಬೈರಾಪುರದ ವೀರಾಂಜನೇಯ, ಧರ್ಮಪುರಿಯ ವೀರಾಂಜನೇಯ, ಕವಳಿಕೆರೆಯ ಆಂಜನೇಯಸ್ವಾಮಿ, ನೆರಲಿಕೆರೆಯ ಆಂಜನೇಯ, ರಾಜನಹಳ್ಳಿಯ ವೀರಾಂಜನೇಯ, ಕಿರುಗಡಲು ಹನುಮಂತರಾಯ, ಹೊಳೆ ಬೆಳ್ಳೂರು ಆಂಜನೇಯ, ರಾಮಸಮುದ್ರ ಶ್ರೀರಾಮಾಂಜನೇಯ, ಮಣಿಪುರದ ಆಂಜನೇಯ, ಪಾಳ್ಯ ಹೋಬಳಿಯ ತಾಳೂರು ಗ್ರಾಮದ ವ್ಯಾಸ ಹನುಮಂತರಾಯ, ಯರೆಹಳ್ಳಿ ಆಂಜನೇಯ, ಪಾಳ್ಯಗ್ರಾಮದ ಕೋಟೆ ಆಂಜನೇಯ, ಎೆಚ್.ಎನ್‌ಪುರದ ಅಂಜನೇಯ, ಸಿಂಗೋಡನಹಳ್ಳಿ, ಕೊಟಿಗನಹಳ್ಳಿ, ಕೆರೆಹಳ್ಳಿಗ್ರಾಮಗಳ ಅಂಜನೇಯ, ಕುಂದೂರು ಹೋಬಳಿಯ ಟಿ.ತಿಮ್ಮನಹಳ್ಳಿಯ ಕಾರ್ಯಸಿದ್ಧಿ ಆಂಜನೇಯಸ್ವಾಮಿ, ಕಡಗಬಾಲದ ವೀರಾಂಜನೇಯ ಸ್ವಾಮಿ, ಸುಳುಗೋಡು ಅಂಜನೇಯ, ರಾಜನಹಳ್ಳಿಯ ಅಂಜನೇಯ, ಗಂಜಿಗೆರೆ ಅಭಯ ಆಂಜನೇಯ, ಹಾಂಜಿಹಳ್ಳಿಯ ಹನುಮಂತಪ್ಪ, ಮುತ್ತಿಗೆಯ ಕೇಶವ ಆಂಜನೇಯ, ಬೆಟ್ಟದಲ್ಲಯ ಬೆಟ್ಟದ ಆಂಜನೇಯ, ಗಿರಿಗಟ್ಟ, ಕರಿಗೌಡನಹಳ್ಳಿ, ಚಾಕನಹಳ್ಳಿ, ಮಣಿಗನಹಳ್ಳಿ, ಮಂಠಿಕೊಪ್ಪಲು ಗ್ರಾಮಗಳ ಆಂಜನೇಯಸ್ವಾಮಿ, ಕೆಂಚಮ್ಮನ ಹೊಸಕೋಟೆ ಹೋಬಳಿಯ ಮಲ್ಲಾಪುರದ ಶ್ರೀ ಆಂಜನೇಯ, ಮಾದಿಹಳ್ಳಿಯ ಆಂಜನೇಯಸ್ವಾಮಿ, ಪುರಭೈರವನಹಳ್ಳಿ ಅಂಜನೇಯ ಸ್ವಾಮಿ ದೇಗುಲಗಳಲ್ಲಿ ಹನುಮದ್ ವ್ರತದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಇದೇ ವೇಳೆ ರಾಮನಾಮ ಸ್ಮರಣೆ ಹಾಗೂ ಅನ್ನದಾನ ನಡೆಯಿತು.

ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ ಇತರರು ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.