ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ದೇವಾಲಯದ ಮೂರ್ತಿಗೆ ಸಿದ್ಧಪಡಿಸಿರುವ ಚಿನ್ನದ ಆಭರಣಗಳೊಂದಿಗೆ ಬೆಟ್ಟ ಹತ್ತಿದ ಎಎಂಆರ್ ಗ್ರೂಪ್ ಮಾಲೀಕ ಡಾ.ಎ. ಮಹೇಶರೆಡ್ಡಿ ಮತ್ತು ಕುಟುಂಬ ಸದಸ್ಯರು, ಶಾಸಕ ಗಾಲಿ ಜನಾರ್ದನರೆಡ್ಡಿ, ಪತ್ನಿ ಲಕ್ಷ್ಮಿ ಅರುಣಾ ಇತರರು. 
ರಾಜ್ಯ

ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಸ್ವರ್ಣಾಭರಣ

ಪ್ರಮುಖ ಮುಖ್ಯಾಂಶಗಳು

  • ಅಂಜನಾದ್ರಿಯಲ್ಲಿ ಹರಕೆ ತೀರಿಸಿದ ಹೈದರಾಬಾದ್ ಉದ್ಯಮಿ
  • ಚಿನ್ನದ ಕಿರೀಟ, ಗದೆ ಸಮರ್ಪಿಸಿದ ಎಎಂಆರ್ ಗ್ರೂಪ್ ಮಾಲೀಕ
ಗಂಗಾವತಿ: ಅಂಜನಾದ್ರಿ ಆಂಜನೇಯಸ್ವಾಮಿ ದೇವಾಲಯದ ಮೂರ್ತಿಗೆ ಹೈದರಾಬಾದ್ ಮೂಲದ ಉದ್ಯಮಿಗಳ ಕುಟುಂಬವೊಂದು ಶುಕ್ರವಾರ 2.5 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಸಮರ್ಪಿಸಿತು.
ದೇಶದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಎಎಂಆರ್ ಗ್ರೂಪ್ ಮಾಲೀಕ ಡಾ. ಎ. ಮಹೇಶರೆಡ್ಡಿ ಹಾಗೂ ಅವರ ಕುಟುಂಬ ಸದಸ್ಯರು ದೇವಾಲಯಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿಪೂರ್ವಕ ಕಾಣಿಕೆ ಅರ್ಪಿಸಿದರು. ಹೈದರಾಬಾದ್‌ನ ನುರಿತ ಚಿನ್ನದ ಕುಸುರಿ ಕೆಲಸಗಾರರ ತಂಡವು ಈ ಪ್ರಭಾವಳಿ, ಕಿರೀಟ, ಗದೆ, ಛತ್ರಿ ಹಾಗೂ ಚಾಮರಗಳನ್ನೊಳಗೊಂಡ ಚಿನ್ನದ ಆಭರಣಗಳನ್ನು ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಿದೆ.
ಅಂಜನಾದ್ರಿ ಬೆಟ್ಟದ ದೇವಾಲಯದ ಮೂರ್ತಿಗೆ ಚಿನ್ನದ ಆಭರಣಗಳಿಂದ ಅಲಂಕರಿಸಿರುವುದು.

ಇದೇ ತಂಡವು ದೇವಾಲಯದ ಮೂರ್ತಿಗೆ ಆಭರಣಗಳನ್ನು ಅಲಂಕರಿಸಿತು. ಈ ಸಂದರ್ಭ ಸ್ಥಳೀಯ ಹಾಗೂ ಆಂಧ್ರಪ್ರದೇಶದಿಂದ ಆಗಮಿಸಿದ್ದ ಋತ್ವಿಜರ ತಂಡವು ವಿಶೇಷ ಪೂಜೆ ಹಾಗೂ ಸಂಕಲ್ಪದ ವಿಧಿವಿಧಾನಗಳನ್ನು ನೆರವೇರಿಸಿತು.
ಹರಕೆ ಸಲ್ಲಿಸಲು ಕಾರಣರಾದ ಶಾಸಕ ಗಾಲಿ ಜನಾರ್ದನರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮೀ ಅರುಣಾ ಅವರು ಸಹ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಭರಣ ಸಮರ್ಪಣೆಯ ಹಿನ್ನೆಲೆಯಲ್ಲಿ ಬೆಟ್ಟದ ಪಾದಗಟ್ಟೆ ಹಾಗೂ ಬೆಟ್ಟದ ಮೇಲಿರುವ ದೇವಾಲಯವನ್ನು ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಈ ವೇಳೆ ದೇವಾಲಯ ಸಮಿತಿಯ ವತಿಯಿಂದ ಡಾ. ಎ. ಮಹೇಶರೆಡ್ಡಿ ಮತ್ತು ಅವರ ಕುಟುಂಬವನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ಗಳಾದ ಯು. ವಸಂತಕುಮಾರಿ, ವಿಶ್ವನಾಥ ಮುರಡಿ, ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡಗೌಡರ್, ಮಾಜಿ ಸಂಸದ ಎಸ್. ಶಿವರಾಮನಗೌಡ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಹೀರೂರು, ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು, ಪಂಪಣ್ಣನಾಯಕ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

ಅಯೋಧ್ಯಾ ಮತ್ತು ತಿರುಪತಿ ಮಾದರಿ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 240 ಕೋಟಿ ರೂ. ಅನುದಾನ ಲಭ್ಯವಿದೆ. 102 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, 20 ಕೋಟಿ ರೂ. ವೆಚ್ಚದ ರೋಪ್‌ವೇ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಬೆಟ್ಟದ ಕೆಲ ಭಾಗವು ಅರಣ್ಯ ವ್ಯಾಪ್ತಿಗೆ ಬರುವುದರಿಂದ ಕಾಮಗಾರಿ ವಿಳಂಬವಾಗಿತ್ತು. ಜಿಲ್ಲಾಡಳಿತವು ಈಗಾಗಲೇ ಅರಣ್ಯ ವ್ಯಾಪ್ತಿಯಿಂದ ಆ ಪ್ರದೇಶವನ್ನು ಬೇರ್ಪಡಿಸಲು ಅಗತ್ಯ ಕ್ರಮ ಕೈಗೊಂಡಿದ್ದು, ದಾಖಲೆಗಳನ್ನು ಸಂಗ್ರಹಿಸಿದೆ. ಬಳ್ಳಾರಿ ವೃತ್ತದ ಅರಣ್ಯಾಧಿಕಾರಿಗಳಿಂದ ನಿರಪೇಕ್ಷಣಾ ಪತ್ರ (ಘೆಇ) ದೊರೆತ ತಕ್ಷಣ ಕಾಮಗಾರಿ ವೇಗ ಪಡೆದುಕೊಳ್ಳಲಿದೆ.

— ಗಾಲಿ ಜನಾರ್ದನರೆಡ್ಡಿ, ಗಂಗಾವತಿ ಶಾಸಕ