ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವರಿಗೆ ಹೂವಿನ ಅಲಂಕಾರ
- ರಾಜಧಾನಿಯಾದ್ಯಂತ ಹನುಮದ್ ವ್ರತ ಆಚರಣೆ
- ದೇವಾಲಯಗಳಲ್ಲಿ ವಿಶೇಷ ಪೂಜೆ
- ರಾಮಾಂಜನೇಯ ಗುಡ್ಡದಲ್ಲಿ ಪಲ್ಲಕ್ಕಿ ಉತ್ಸವ
ಬೆಂಗಳೂರು: ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಮಂಗಳವಾರ ಹನುಮದ್ ವ್ರತವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು ಮುಂಜಾನೆಯಿಂದಲೇ ಹತ್ತಿರದ ಹನುಮ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಮುಂಜಾನೆಯಿಂದಲೇ ಸುಪ್ರಭಾತದೊಂದಿಗೆ ಆರಂಭವಾದ ಆಚರಣೆ ತಡರಾತ್ರಿವರೆಗೂ ಜರುಗಿತು. ಕೆಲವೆಡೆ ಆಂಜನೇಯ ಸ್ವಾಮಿಯ ರಥೋತ್ಸವ, ಪಲ್ಲಕ್ಕಿ ಉತ್ಸವ, ಮೆರವಣಿಗೆಯೂ ನಡೆಯಿತು. ದೇವರಿಗೆ ಬೆಳ್ಳಿ ಕವಚ ಧಾರಣೆ ಮಾಡಲಾಗಿತ್ತು. ಕೆಲ ದೇವಾಲಯಗಳಲ್ಲಿ ಬೆಣ್ಣೆ ಅಲಂಕಾರ, ಹೂವಿನ ಅಲಂಕಾರ ವಿಶೇಷವಾಗಿತ್ತು. ಹರಕೆ ಹೊತ್ತವರು ತುಳಸಿ ಹಾರ, ವಡೆ ಹಾರ, ವೀಳ್ಯದೆಲೆ ಹಾರಗಳನ್ನು ತಂದು ದೇವರಿಗೆ ಅರ್ಪಿಸಿದರು. ಭಕ್ತರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಧಾರ್ಮಿಕ ಕೈಂಕರ್ಯ:
ಮೈಸೂರು ರಸ್ತೆಯ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯ, ಮಹಾಲಕ್ಷ್ಮೀ ಲೇಔಟ್‌ನ ಶ್ರೀ ಪ್ರಸನ್ನ ಆಂಜನೇಸ್ವಾಮಿ ದೇವಸ್ಥಾನ, ಜಯನಗರದ 9ನೇ ಬ್ಲಾಕ್‌ನ ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯ, ಬಸವನಗುಡಿಯ ರಾಮಾಂಜನೇಯ, ಗುಡ್ಡದ ಆಂಜನೇಯಸ್ವಾಮಿ, ಶ್ರೀ ಕಾರಂಜಿ ಆಂಜನೇಯಸ್ವಾಮಿ, ಕೆ.ಆರ್. ರಸ್ತೆಯ ಕೋಟೆ ಆಂಜನೇಯಸ್ವಾಮಿ ಗುಡಿ, ಮಿಂಟೋ ಆಂಜನೇಯ ದೇವಾಲಯ, ಬಳೇಪೇಟೆಯ ಪಿಳ್ಳಾಂಜನೇಯಸ್ವಾಮಿ ಸೇರಿ ನಗರದ ವಿವಿಧ ಹನುಮ ಮತ್ತು ರಾಮ ಮಂದಿರಗಳಲ್ಲಿ ವಿಶೇಷ ಅಲಂಕಾರ, ಪೂಜೆ ಸೇರಿ ಧಾರ್ಮಿಕ ಕೈಂಕರ್ಯಗಳು ನಡೆದವು.
ಗಾಳಿ ಆಂಜನೇಯನಿಗೆ ಸಹಸ್ರನಾಮಾರ್ಚನೆ
ಶ್ರೀ ಗಾಳಿ ಆಂಜನೇಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ಅಭಿಷೇಕ, ಪುಷ್ಪಾಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಸಹಸ್ರನಾಮಾರ್ಚನೆ ನಡೆಯಿತು. ದೇವಾಲಯದ ಮುಂಭಾಗದಲ್ಲಿರುವ 21 ಅಡಿಯ ಆಂಜನೇಯ ಸ್ವಾಮಿ ವಿಗ್ರಹಕ್ಕೂ ಅಭಿಷೇಕ ಹಾಗೂ ಅಲಂಕಾರ ಮಾಡಲಾಯಿತು. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ನಂತರದಲ್ಲಿ ಇದೇ ಮೊದಲ ಬಾರಿಗೆ ಅತೀ ವಿಜೃಂಭಣೆಯಿಂದ ಹನಮದ್ ವ್ರತ ಆಚರಿಸಲಾಯಿತು. ದೇವಾಲಯ ಆವರಣ ಹಾಗೂ ಹೊರಾಂಗಣ ವಿದ್ಯುತ್ ದೀಪಗಳು ಹಾಗೂ ಬಣ್ಣ ಬಣ್ಣದ ಹೂವು, ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಸೇರಿ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ರಾಮಾಂಜನೇಯ ಗುಡ್ಡದಲ್ಲಿ ಬೆಳಗ್ಗೆಯೇ ಸ್ವಾಮಿಗೆ ಅಭಿಷೇಕ ಮತ್ತು ಹೂವಿನ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಮಹಾಮಂಗಳಾರತಿ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ದೇವಾಲಯದ ಆವರಣದಲ್ಲಿ ಹರಿಕಥೆ, ಭಜನೆ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜತೆಗೆ ಹನುಮಂತನಗರದ ಮುಖ್ಯ ಬೀದಿಗಳಲ್ಲಿ ಆಂಜನೇಯ ಸ್ವಾಮಿಯ ಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಿತು.