2028ರ ಚುನಾವಣಾ ಕದನಕ್ಕೆ ಕೈ ತಾಲೀಮು 2028 election battle
ಮುಳಬಾಗಿಲು: ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆ ವೇಳೆಗೆ ಮುಳಬಾಗಿಲು ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರ ಎಸ್ಸಿ ಮಹಿಳಾ ಮೀಸಲು ಅಥವಾ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರವಾಗುತ್ತದೆ ಎಂಬ ಮಾತುಗಳು ದಟ್ಟವಾಗಿರುವ ನಡುವೆಯೇ ಕಾಂಗ್ರೆಸ್ ಮುಖಂಡರು ಪಕ್ಷ ಸಂಟನೆಯಲ್ಲಿ ತೊಡಗಿದ್ದು, ಗ್ರಾಮಮಟ್ಟದಲ್ಲಿ ಕಾಂಗ್ರೆಸ್ ಬೇರು ಸದೃಢಗೊಳಿಸುವ ಕಾರ್ಯ ಆರಂಭಿಸಿದ್ದಾರೆ.2028 election battle
ಅದರ ಅಂಗವಾಗಿ ತಾಲೂಕಿನ ದುಗ್ಗಸಂದ್ರ ಹೋಬಳಿ ವ್ಯಾಪ್ತಿಯಲ್ಲಿ ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆದಿನಾರಾಯಣ ನೇತೃತ್ವದಲ್ಲಿ "ಕಾಂಗ್ರೆಸ್ ನಡಿಗೆ ಹಳ್ಳಿಗಳ ಕಡೆಗೆ' ಎಂಬ ಕಾರ್ಯಕ್ರಮ ಮೂಲಕ ಚಾಲನೆ ದೊರೆತಿದೆ. ದುಗ್ಗಸಂದ್ರ ಹೋಬಳಿಯ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸರ್ಕಾರದ ಪಂಚ ಗ್ಯಾರಂಟಿಗಳ ಬಗ್ಗೆ ಸ್ವ&ಸಹಾಯ ಸಂಘದ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಹಾಗೂ ಆದಿನಾರಾಯಣ ಚಾರಿಟಬಲ್ ಟ್ರಸ್ಟ್ನಿಂದ "ದೀರ್ಘಸುಮಂಗಲೀ ಭವ' ಹಮ್ಮಿಕೊಳ್ಳುವ ಕುರಿತು ಮಾಹಿತಿ ನೀಡಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರದ ಯೋಜನೆಗಳು ಪ್ರತಿ ಫಲಾನುಭವಿಗೂ ಸಿಗಬೇಕು. ಕೈ ತಪ್ಪಿರುವವರಿಗೆ ಯೋಜನೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮಗಳ ಭೇಟಿಯಲ್ಲಿ ಆದ್ಯತೆ ನೀಡಲಾಗಿದೆ. ಜೆಡಿಎಸ್ ಮತ್ತು ಬಿಜೆಪಿಗಿಂತಲೂ ಜನರ ಕಷ್ಟ ಪರಿಹರಿಸಲು ತಾಲೂಕು ಕಾಂಗ್ರೆಸ್ ಸದಾ ಸಿದ್ಧವಿದೆ ಎಂಬ ಅಭಯದ ಮೂಲಕ ಕಾಂಗ್ರೆಸ್ನತ್ತ ಜನರನ್ನು ಸೆಳೆಯುವ ಕಸರತ್ತು ಶುರುವಾಗಿದೆ.
ಒಂದು ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ., ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಎಲ್ಲ ಸದಸ್ಯರಿಗೂ ತಲಾ 10 ಕೆಜಿ ಅಕ್ಕಿ, ಉಚಿತ ವಿದ್ಯುತ್, ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3,000 ರೂ. ಯುವನಿಧಿ ನೀಡಲಾಗುತ್ತಿದ್ದು, ಈ ಸೌಲಭ್ಯ ಸಿಗದ ಕುಟುಂಬಗಳಿಗೆ ಯೋಜನೆ ದೊರಕಿಸಿಕೊಡುವ ಜತೆಗೆ ಚುನಾವಣೆ ಪೂರ್ವ ಪ್ರಚಾರಕ್ಕೆ ಈ ವೇದಿಕೆ ಬಳಸಿಕೊಳ್ಳಲಾಗುತ್ತಿದೆ
ಆದಿನಾರಾಯಣ ಚಾರಿಟಬಲ್ ಟ್ರಸ್ಟ್ನಿಂದ ತಾಲೂಕಿನ ಗ್ರಾಮಗಳ ಹೆಣ್ಣು ಮಕ್ಕಳಿಗೆ ಅರಿಶಿಣ, ಕುಂಕುಮ, ಸೀರೆ ಕುಪ್ಪಸ ತೆಂಗಿನ ಕಾಯಿ ಒಳಗೊಂಡ ಬಾಗಿನ ಕಾರ್ಯಕ್ರಮವನ್ನು ಹಳ್ಳಿ ಮಟ್ಟದಲ್ಲಿ ಹಮ್ಮಿಕೊಳ್ಳುವ ಪೂರ್ವಭಾವಿ ಸಭೆಗಳನ್ನು ನಡೆಸಿ ಮುಂಬರುವ ಗ್ರಾಪಂ, ತಾಲೂಕು, ಜಿಲ್ಲಾ ಪಂಚಾಯಿತಿ ಎಲೆಕ್ಷನ್ಗೆ ಕಾಂಗ್ರೆಸ್ ಅಡಿಪಾಯ ಗಟ್ಟಿಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾನುಲ್ಲ, ಕಾಂಗ್ರೆಸ್ ಮುಖಂಡರಾದ ಜಿ.ರಾಮಲಿಂಗಾರೆಡ್ಡಿ, ಆರ್. ಆರ್. ರಾಜೇಂದ್ರಗೌಡ, ಎಂ.ಸಿ.ಸರ್ವಜ್ಞ ಗೌಡ, ಗುಜ್ಜನಹಳ್ಳಿ ಮಂಜುನಾಥ್, ಕೆ.ಎನ್. ಉಮಾಶಂಕರ್, ಆರ್.ಎಸ್. ಸುಹಾಸ್ ಶೆಟ್ಟಿ, ಕೆ. ಸತೀಶ್, ಸಿದ್ಧಘಟ್ಟ ಮುನಿಸ್ವಾಮಿಗೌಡ, ಕೆ.ಎಂ. ವೆಂಕಟರಾಮರೆಡ್ಡಿ, ಮಲ್ಲಿಕಾರ್ಜುನರೆಡ್ಡಿ, ಹನುಮನಹಳ್ಳಿ ಸುಬ್ರಮಣ, ಪಿ.ಎಂ. ಸದಾಶಿವಯ್ಯ, ಜಮ್ಮನಹಳ್ಳಿ ಕೃಷ್ಣ, ಕಗ್ಗಿನಹಳ್ಳಿ ಶ್ರೀನಿವಾಸ್, ಶಶಿಕಲಾ, ತಿರುವೇಣಿಯಮ್ಮ, ಭೈರೇಗೌಡ, ಅಮರ್ ಮತ್ತಿತರ ಮಖಂಡರು ಕಾಂಗ್ರೆಸ್ ನಡಿಗೆ ಹಳ್ಳಿಗಳ ಕಡೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.