Handler tires for timeliness, precision, and safety.
ಭಾರಿ ಗಾತ್ರದ ಟಯರ್ಗಳನ್ನು ನಿರ್ವಹಿಸುವುದು ಅತ್ಯಂತ ಜವಾಬ್ದಾರಿಯುತ ಮತ್ತು ಸವಾಲಿನ ಕೆಲಸವಾಗಿದೆ. ಇಂತಹ ಕಾರ್ಯಗಳಲ್ಲಿ ಸಮಯ, ನಿಖರತೆ ಮತ್ತು ಸುರಕ್ಷತೆ ಈ ಮೂರು ಅಂಶಗಳು ಬಹಳ ಮುಖ್ಯ.ಸೂಕ್ತ ಯಂತ್ರೋಪಕರಣಗಳ ಬಳಕೆಯಿಂದ ಇಂತಹ ಕೆಲಸಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಬಿಇಎಂಎಲ್ ರಕ್ಷಣಾ ಉತ್ಪಾದನಾ ಕಾರ್ಯದರ್ಶಿ ದಿನೇಶ್ ಮಹೂರ್ ತಿಳಿಸಿದರು.
ಬಿಇಎಂಎಲ್ ಕಾರ್ಖಾನೆ ಆವರಣದಲ್ಲಿ ಬಿಇಎಂಎಲ್ನಿಂದ ನೂತನವಾಗಿ ತಯಾರಿಸಿರುವ ಬಿಎಲ್& 40 ಟಿಎಚ್ ಟಯರ್ ಹ್ಯಾಂಡ್ಲರ್ಅನ್ನು ಉದ್ಘಾಟಿಸಿ ಮಾತನಾಡಿ,ಇಂದು ಸಂಸ್ಥೆಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಗುರುತಿಸುವ ದಿನವಾಗಿದೆ. ಗುಣಮಟ್ಟದ ದೈತ್ಯ ಯಂತ್ರವು ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಸಲಿದೆ ಎಂದರು.
ಸಿಎಂಡಿ ಶಾಂತನು ರಾಯ್ ಮಾತನಾಡಿ, ಹೊಸ ಟಯರ್ ಹ್ಯಾಂಡ್ಲರ್ ನಮ್ಮ ಸಿಬ್ಬಂದಿ ದೈಹಿಕ ಶ್ರಮವನ್ನು ಕಡಿಮೆ ಮಾಡುವುದರ ಜತೆಗೆ, ಕೆಲಸದ ವೇಗ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿಯಾಗಲಿದೆ. ಅದಕ್ಕಿಂತ ಮುಖ್ಯವಾಗಿ ಸುರಕ್ಷತೆ ಮೊದಲು ಎಂಬ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಒಂದು ಯಂತ್ರ ಉದ್ಘಾಟಿಸುತ್ತಿಲ್ಲ, ಹೊಸ ತಂತ್ರಜ್ಞಾನಕ್ಕೆ ಸ್ವಾಗತ ಕೋರುತ್ತಿದ್ದೇವೆ. ಕಾರ್ಯಕ್ಷಮತೆ ಮತ್ತು ಗುಣಮಟ್ಟದ ಹೊಸ ಹಂತದತ್ತ ಹೆಜ್ಜೆ ಇಡುತ್ತಿದ್ದೇವೆ ಎಂದರು.
ಯಾವುದೇ ಆಧುನಿಕ ಯಂತ್ರದ ಸಾಮರ್ಥ್ಯ ನಿರ್ವಹಿಸುವ ಸಿಬ್ಬಂದಿ ಜ್ಞಾನ, ಕೌಶಲ ಮತ್ತು ಜವಾಬ್ದಾರಿತನದ ಮೇಲೆ ಅವಲಂಬಿತವಾಗಿರುತ್ತದೆ. ಈ ಟಯರ್ ಹ್ಯಾಂಡ್ಲರ್ ಅನ್ನು ಸುರಕ್ಷಿತ, ನಿಯಮಾನುಸಾರ ಮತ್ತು ಗರಿಷ್ಠ ಕಾರ್ಯಕ್ಷಮತೆಯೊಂದಿಗೆ ಬಳಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.