ಕಾಂಗ್ರೆಸ್ ನಡೆ ಮತ ರಕ್ಷಣೆ ಕಡೆಗೆ’ ಕಾರ್ಯಾಗಾರ 
ರಾಜ್ಯ

ಸಭೆಗೆ ಗೈರಾದ ಪದಾಧಿಕಾರಿಗಳಿಗೆ ಕೈ ಗೇಟ್‌ಪಾಸ್ ?

ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಹಕ್ಕು ಉಳಿಸುವ ಕಾರ್ಯಾಗಾರಕ್ಕೆ ಗೈರಾದ ಪಕ್ಷದ 60 ಪದಾಧಿಕಾರಿಗಳಿಗೆ ಕಾಂಗ್ರೆಸ್ ಗೇಟ್‌ಪಾಸ್‌ಗೆ ಸೂಚಿಸಿದೆ. ಈ ಮೂಲಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಶಿಸ್ತಿನ ಪಾಠ ಕಲಿಸಲು ಹೈಕಮಾಂಡ್ ಕ್ರಮ ತೆಗೆದುಕೊಂಡಿದೆ.
ದೇವನಹಳ್ಳಿಯ ಖಾಸಗಿ ಹೋಟೆಲ್‌ನಲ್ಲಿ 2ನೇ ದಿನದ ‘ಕಾಂಗ್ರೆಸ್ ನಡೆ ಮತ ರಕ್ಷಣೆ ಕಡೆಗೆ’ ಕಾರ್ಯಾಗಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆ ಚುನಾವಣೆ ಕುರಿತ ಸಭೆ ನಡೆಸಲಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಭೆಯ ಅಧ್ಯಕ್ಷತೆ ವಹಿಸಿದ್ದರೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು ಭಾಗವಹಿಸಿದ್ದರು. ಕಾರ್ಯಾಗಾರಕ್ಕೆ ಪಕ್ಷದ ಪದಾಧಿಕಾರಿಗಳು ಮತ್ತು ಮೊದಲ ದಿನ ಗೈರಾಗಿದ್ದ ಸಚಿವರು ಮತ್ತು ಶಾಸಕರ ಹಾಜರಾತಿಗೆ ಸೂಚಿಸಲಾಗಿತ್ತು. ಕಾಂಗ್ರೆಸ್‌ನ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ 130 ಜನ ಭಾಗವಹಿಸಬೇಕಿತ್ತು. ಈ ಪೈಕಿ 60 ಪದಾಧಿಕಾರಿಗಳು ಗೈರಾಗಿದ್ದರು. ಅವರ ಪಟ್ಟಿ ತರಿಸಿಕೊಂಡ ಸುರ್ಜೇವಾಲಾ ಸಭೆಯಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಸ್‌ಐಆರ್ ಮತ್ತು ಜಿಬಿಎ ಚುನಾವಣೆ ಅಂತಹ ಸಭೆಗಳಿಗೆ ಬಾರದೇ ಇದ್ದರೆ ಅಂತಹವರಿಗೆ ಏಕೆ ಪಕ್ಷದ ಜವಾಬ್ದಾರಿ. ಅವರ ಪಟ್ಟಿ ಮಾಡಿ ವಜಾ ಮಾಡಬೇಕೆಂದು ವೇದಿಕೆಯಲ್ಲಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಜಿ.ಸಿ.ಚಂದ್ರಶೇಖರ್‌ಗೆ ಸುರ್ಜೇವಾಲಾ ಸೂಚಿಸಿದರು ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.
ಈ ಹಿಂದೆಯೂ ಕೆಲ ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಪಕ್ಷ ಸಂಘಟನೆ ಮತ್ತಿತರ ಸಭೆಗಳಿಗೆ ಗೈರಾಗುವುದು ಸಾಮಾನ್ಯವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಅಶಿಸ್ತು ತೋರುವ ಪದಾಧಿಕಾರಿಗಳನ್ನು ವಜಾ ಮಾಡಿ ಹೊಸದಾಗಿ ನೇಮಕ ಮಾಡಬೇಕೆಂದು ದೆಹಲಿಗೆ ಪಟ್ಟಿ ಕಳುಹಿಸಲಾಗಿತ್ತು. ಆದರೆ, ಏಕಾಏಕಿ ಶಿಸ್ತುಕ್ರಮ ಸರಿ ಬರುವುದಿಲ್ಲ ಎಂದು ಮುಖಂಡರೇ ಅದನ್ನು ತಡೆ ಹಿಡಿಯುವ ಪ್ರಯತ್ನ ಮಾಡಿದ್ದರು.
ದೇಶದಲ್ಲಿಯೇ ಕಾಂಗ್ರೆಸ್ ಬಹಳ ಗಂಭೀರವಾಗಿ ಪರಿಗಣಿಸಿರುವ ಎಸ್‌ಐಆರ್ ಕುರಿತ ಸಭೆಗೆ ಗೈರಾಗಿರುವುದು ಸುರ್ಜೇವಾಲಾ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಶಿಸ್ತುಕ್ರಮಕ್ಕೆ ಸೂಚನೆ ನೀಡಿದ್ದಾರೆ.