DK Shivakumar | ಕೈ ಬಿಕ್ಕಟ್ಟು ಸುಖಾಂತ್ಯವಾಗಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್  
ರಾಜ್ಯ

ಕೈ ಬಿಕ್ಕಟ್ಟು ಸುಖಾಂತ್ಯ..! ರಾಮಲಿಂಗಾ ರೆಡ್ಡಿ ನನ್ನ ಫ್ರೆಂಡ್, ಎಲ್ಲವೂ ಕ್ಲಿಯರ್ ಆಗಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್ | DK Shivakumar

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಅಸಮಾಧಾನದ ಬಿಕ್ಕಟ್ಟು ಸಂಪೂರ್ಣವಾಗಿ ಬಗೆಹರಿದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿಕೆಶಿ, ರಾಮಲಿಂಗಾ ರೆಡ್ಡಿ ನನ್ನ ಆತ್ಮೀಯ ಸ್ನೇಹಿತರು. ಅವರ ಅಸಮಾಧಾನದ ವಿಷಯ ಈಗ ಸಂಪೂರ್ಣವಾಗಿ ಇತ್ಯರ್ಥವಾಗಿದೆ (Issue has been solved). ಮಾಧ್ಯಮಗಳು ಕೇವಲ ಸ್ಟೋರಿಗಳಿಗಾಗಿ ಇಲ್ಲದ ಸುದ್ದಿಗಳನ್ನು ಸೃಷ್ಟಿಸಬೇಡಿ, ನೀವೇನೇ ಮಾಡಿದ್ರೂ ಅದೆಲ್ಲವೂ ಹುಸಿಯಾಗುತ್ತವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಆಂತರಿಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪ್ರಧಾನಿ ಮೋದಿ ಅವರು ನನಗೆ ಶುಭಕೋರಿದ್ದಾರೆ, ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ನಾವು ರಾಜಕೀಯ ಮಾಡುವುದು ಬೇಡ, ಅವರೂ ರಾಜಕೀಯ ಮಾಡುವುದು ಬೇಡ. ನಮ್ಮ ಸರ್ಕಾರ ಇರುವುದು ಜನರ ಮತ್ತು ರಾಜ್ಯದ ಅಭಿವೃದ್ಧಿಗಾಗಿ. ಶೀಘ್ರದಲ್ಲೇ ರಾಜ್ಯದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ನಾನು ಪ್ರಧಾನಿ ಮೋದಿ ಅವರನ್ನು ಖುದ್ದಾಗಿ ಭೇಟಿ ಮಾಡಲಿದ್ದೇನೆ ಎಂದು ತಿಳಿಸಿದರು.

ಡಿ. ದೇವರಾಜ ಅರಸು ಅವರ ಸಾಧನೆ ಸ್ಮರಣೆ

ಇದೇ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರನ್ನು ಸ್ಮರಿಸಿದ ಸಿಎಂ, ಅರಸು ಅವರು ನಮ್ಮನ್ನು ಅಗಲಿ 40 ವರ್ಷಗಳೇ ಕಳೆದಿವೆ. ನನ್ನ ಕಾಲೇಜು ದಿನಗಳಲ್ಲಿ ಅವರ ಭಾಷಣಗಳನ್ನು ಕೇಳಿದ್ದೆ, ಅವರ ಮಾತುಗಳು ಕಿವಿಗೆ ಇಂಪಾಗಿದ್ದವು ಮತ್ತು ರಾಜಕಾರಣದ ನೈಜ ಚಿತ್ರಣವನ್ನು ಬಿಂಬಿಸುತ್ತಿದ್ದವು. ನೂರು ವರ್ಷ ಕಳೆದರೂ ಅವರ ಸಾಧನೆಗಳು ಶಾಶ್ವತವಾಗಿ ಬದುಕಿರುತ್ತವೆ. ಅವರು ಜಾರಿಗೆ ತಂದ ಭೂ ಸುಧಾರಣೆ ಕಾಯ್ದೆ ಇಡೀ ದೇಶಕ್ಕೇ ಮಾದರಿಯಾಗಿದೆ ಎಂದರು.
ಹಿಂದುಳಿದ ವರ್ಗಗಳ ನಾಯಕರ ಮೇಲೆ ವಿಶೇಷ ಕಾಳಜಿ ಹೊಂದಿದ್ದ ಅರಸು ಅವರು ಎಲ್ಲಾ ಜನಾಂಗವನ್ನು ಸಮಾನವಾಗಿ ಬೆಳೆಸಿದ್ದರು ಮತ್ತು ಇಂದಿನ ಐಟಿ ಹಬ್ ಆಗಿರುವ ಎಲೆಕ್ಟ್ರಾನಿಕ್ ಸಿಟಿಗೆ ಅವತ್ತಿನ ಕಾಲದಲ್ಲೇ ಅಡಿಪಾಯ ಹಾಕಿದ ದೂರದರ್ಶಿ ನಾಯಕ. ಶಿಸ್ತು ಮತ್ತು ತ್ಯಾಗವನ್ನು ಒಟ್ಟಿಗೆ ಕೊಂಡೊಯ್ದ ಅವರ ಮಾರ್ಗದರ್ಶನದಲ್ಲೇ ನಾವೆಲ್ಲರೂ ಮುನ್ನಡೆಯೋಣ ಎಂದು ಕರೆ ನೀಡಿದರು.