ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
ಬೆಂಗಳೂರು: ಸಂಚಾರ ಸಿಕ್ಕಿನಿಂದ ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆ ಕೈಗೊಳ್ಳಲು ಬೇಕಾಗಿರುವ ಎಲ್ಲ ಸಹಾಯ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಸಂಕಲ್ಪ ಸಮಾವೇಶದಿಂದ ವಾಹನ ಸಂಚಾರ ಸಿಕ್ಕು ಆಗಿದ್ದು ನಿಜ. 2-3 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗದೇ ಉಳಿದಿದ್ದಾರೆ ಎಂಬ ಸುದ್ದಿ ನೋಡಿದ್ದು, ಈ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಅವರಿಗೆ ಮುಂದಿನ ಪರೀಕ್ಷೆ ಕೈಗೊಳ್ಳಲು ಬೇಕಾಗಿರುವ ಎಲ್ಲ ಸಹಾಯ ಮಾಡಲು ಸಿದ್ಧ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೀಟ್ ಪರೀಕ್ಷೆಯನ್ನು ಮುಂದೂಡಿಕೆ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸಿಬಿಎಸ್‌ಸಿ ಪರೀಕ್ಷೆಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ದನ್ನೂ ನೋಡಿದ್ದೇವೆ. 12 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ದೇಶದ ಸರೆಂಡರ್ ಮೋದಿ ಅವರಾಗಲಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಾಗಲಿ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರಾ? ನಡೆಯಬಾರದ ಪ್ರಮಾದ ನಡೆದಿದೆ ಎಂಬಂತೆ ಬೆಂಗಳೂರಿನ ಸಂಸದರು ಮಾತನಾಡುತ್ತಿದ್ದಾರೆ. ಆದರೆ, ಪ್ರಶ್ನೆಪತ್ರಿಕೆಯಿಂದ 1.40 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿರುವಾಗ ಪ್ರಧಾನಿ, ಶಿಕ್ಷಣ ಸಚಿವರಾಗಲಿ ಅವರಿಗೆ ಸ್ಪಂದಿಸಿದ್ದಾರಾ ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ 1,400 ವಿದ್ಯಾರ್ಥಿಗಳು, ಯಾದಗಿರಿಯಲ್ಲಿ 286, ದಕ್ಷಿಣ ಕನ್ನಡ ಸೇರಿ ಅನೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಅಲ್ಲಿ ಯಾವ ಕಾರ್ಯಕ್ರಮ ನಡೆದಿತ್ತು? ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದಾಗಿಯೂ ಹೇಳಿದ್ದಾರೆ. ಸುಳ್ಳಿನ ಕಾರ್ಖಾನೆ ಇಟ್ಟುಕೊಂಡಿರುವ ಬಿಜೆಪಿಯವರು ತಮ್ಮ ತಪ್ಪು ಮರೆಮಾಚಲು ಕಾಂಗ್ರೆಸ್ ವಿರುದ್ಧ ಸುಳ್ಳು ನೆಪ ಹೇಳುವುದು ಬೇಡ. ದೇಶದಾದ್ಯಂತ ವಿದ್ಯಾರ್ಥಿಗಳು ಆತಂಕದಲ್ಲಿ ಇರುವಾಗ, ಪರೀಕ್ಷೆ ಬರೆಯದೇ ನಕಲಿ ಪ್ರಮಾಣಪತ್ರ ಹೊಂದಿರುವ ಪ್ರಧಾನಮಂತ್ರಿಗಳು ‘ಪರೀಕ್ಷಾ ಪೆ ಚರ್ಚಾ’ ಮಾಡುತ್ತಾರೆ ಎಂದು ಹರಿಪ್ರಸಾದ್ ಲೇವಡಿ ಮಾಡಿದರು.