ಎಸ್. ಜಾನಕಿ ಅಂತಿಮ ದರ್ಶನ ಪಡೆದ ಹಂಸಲೇಖ
- ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ (88) ವಿಧಿವಶ
- ಮೈಸೂರಿನಲ್ಲಿ ಜಾನಕಿ ಅವರ ಅಂತಿಮ ದರ್ಶನ
- ಸ್ಮಾರಕ ನಿರ್ಮಿಸಲು ಸರ್ಕಾರಕ್ಕೆ ಕೋರಿದ ಹಂಸಲೇಖ
ಮೈಸೂರು: 'ಸ್ವರ ಸರಸ್ವತಿ', ಭಾರತದ 'ಗಾನ ಕೋಗಿಲೆ' ಎಸ್. ಜಾನಕಿ (88) ಅವರ ನಿಧನ ಸುದ್ದಿಗೆ ಇಡೀ ಭಾರತೀಯ ಚಿತ್ರರಂಗ, ಸಂಗೀತ ಲೋಕ, ರಾಜಕೀಯ ಗಣ್ಯರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಹುಟ್ಟೂರು ಅಲ್ಲದಿದ್ದರೂ ಕರುನಾಡಿನಲ್ಲೇ ಉಳಿಯಲು ಬಯಸಿದ್ದ ಜಾನಕಿ ಅವರ ಅಂತಿಮ ದರ್ಶನ ಪಡೆದ ಸಂಗೀತ ನಿರ್ದೇಶಕ ಹಂಸಲೇಖ ರಾಜ್ಯ ಸರ್ಕಾರಕ್ಕೆ ವಿಶೇಷ ಮನವಿಯೊಂದನ್ನು ಸಲ್ಲಿಸಿದ್ದಾರೆ.
ಕರ್ನಾಟಕದಲ್ಲೇ ಉಳಿಯುವುದು ಜಾನಕಿಯಮ್ಮ ಅವರ ಮಹಾದಾಸೆ ಆಗಿತ್ತು. ತಮ್ಮ ಶಿಷ್ಯನೊಂದಿಗೆ ಮೈಸೂರಿನಲ್ಲೇ ಅವರಿದ್ದರು. ಸಾಂಸ್ಕೃತಿಕ ನಗರಿಗೆ ಕೋಡು ಒದಗಿಸಿಕೊಳ್ಳುವಂತ ಸುಸಂದರ್ಭ ಈಗ ಬಂದಿದೆ. ಬಾಲಸುಬ್ರಹ್ಮಣ್ಯ ಮತ್ತು ಜಾನಕಿ ಅವರು, ಈ ಇಬ್ಬರು ಶ್ರೇಷ್ಠ ಗಾಯಕರು ಕರ್ನಾಟಕದಲ್ಲಿಯೇ ಇರಲು ಬಯಸಿದ ದಿಗ್ಗಜರು ಎಂದರು.
ಜಾನಕಿ ಅವರು ಅಪಾರ ದೈವ ಭಕ್ತೆಯಾಗಿದ್ದರು. ತಮ್ಮ ಕೊನೆ ದಿನಗಳನ್ನು ಮೈಸೂರಿನಲ್ಲಿರಲು ಬಯಸಿದ್ದ ಅವರು, ತಮ್ಮ ಶಿಷ್ಯನೊಂದಿಗೆ ಬದುಕಿದರು. ನಮ್ಮ ಸಂಗೀತ ಶಾಲೆಯ ಮೂಲಕ ಮುಂದಿನ ಪೀಳಿಗೆಗೆ ಅವರನ್ನು ಕೊಂಡೊಯ್ಯವುದು ನಮ್ಮೆಲ್ಲರ ಜವಾಬ್ದಾರಿ. ಜಾನಕಿ ಅಮ್ಮನವರದ್ದು ಪರಿಪೂರ್ಣ ಗಾಯನ, ಪರಿಪೂರ್ಣ ಜೀವನ. ಆರು ದಶಕಗಳ ಕಾಲ ವೃತ್ತಿಜೀವನದಲ್ಲಿ ಸೇವೆ ಸಲ್ಲಿಸಿರುವ ಅವರು, ಕರುನಾಡಿಗೆ ಒಂದು ಹೆಮ್ಮೆಯ ಕೋಡು ಎಂದರು.
ನಮ್ಮ ಚಲನಚಿತ್ರರಂಗದ ಅಧ್ಯಕ್ಷೆ ಜಯಮಾಲಾ, ಮೈಸೂರಿನ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಕೇಳಿಕೊಳ್ಳುವುದು ಒಂದೇ. ಅವರ ಕುಟುಂಬಸ್ಥರು ಒಪ್ಪಿಗೆ ಪಡೆದು ಜಾನಕಿ ಅವರ ಬೃಹತ್ ಧ್ಯಾನ ಮಂಟಪದ ಒಂದು ಮೆಮೋರಿಯಲ್ ಸ್ಥಾಪಿಸಲು ನಾವು ಸಿದ್ಧವಿದ್ದೇವೆ ಎಂದು ವಿನಂತಿ ಮಾಡಿಕೊಂಡರು.