ವಿಶ್ವವಿಖ್ಯಾತ ಹಂಪಿ ಉತ್ಸವದ ಸಂಭ್ರಮಕ್ಕೆ ಈ ಬಾರಿ ಬೈ ಸ್ಕೈ ಹೆಲಿಕಾಪ್ಟರ್. 
ರಾಜ್ಯ

ಹಂಪಿ ಉತ್ಸವದಲ್ಲಿ ಮೂರೇ ದಿನದಲ್ಲಿ 66 ಲಕ್ಷ ರೂ. ಅಧಿಕ ಆದಾಯ ಸಂಗ್ರಹ

ಪ್ರಮುಖ ಮುಖ್ಯಾಂಶಗಳು

  • ಹೆಲಿಕಾಪ್ಟರ್ ಹತ್ತಿದ 1800ಕ್ಕೂ ಅಧಿಕ ಮಂದಿ
  • ನಾಲ್ಕನೇ ದಿನವೂ ಮುಂದುವರಿಯಲಿದೆ ಹಾರಾಟ
ತಾಳೂರು ಎಸ್. ಎರ್ರಿಸ್ವಾಮಿ ಹಂಪಿ
ವಿಶ್ವವಿಖ್ಯಾತ ಹಂಪಿ ಉತ್ಸವದ ಸಂಭ್ರಮಕ್ಕೆ ಈ ಬಾರಿ ಬೈ ಸ್ಕೈ ಹೆಲಿಕಾಪ್ಟರ್ ಪ್ರವಾಸವು ವಿಶೇಷ ಮೆರುಗು ನೀಡಿದೆ. ಕಳೆದ ಮೂರು ದಿನಗಳಿಂದ ಪ್ರವಾಸೋದ್ಯಮ ಇಲಾಖೆಯು ಆಯೋಜಿಸಿರುವ ಈ ವೈಮಾನಿಕ ಪ್ರವಾಸಕ್ಕೆ ಪ್ರವಾಸಿಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
ಉತ್ಸವದಲ್ಲಿ ಒಟ್ಟು ಎರಡು ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಯಲ್ಲಿದ್ದು, ಒಂದು ಬಾರಿಗೆ ಪೈಲಟ್ ಸೇರಿ ಏಳು ಜನರು ಪಯಣಿಸಬಹುದಾಗಿದೆ. ಪ್ರತಿದಿನ ಸರಾಸರಿ 14 ರಿಂದ 15 ಬಾರಿ ಹಾರಾಟ ನಡೆಸಲಾಗಿದೆ. ಕಳೆದ ಮೂರು ದಿನಗಳಲ್ಲಿ ಈ ಎರಡು ಹೆಲಿಕಾಪ್ಟರ್‌ಗಳು 300ಕ್ಕೂ ಅಧಿಕ ಬಾರಿ ಆಗಸದಲ್ಲಿ ಪಯಣಿಸಿವೆ. 
ಪ್ರತಿ ವ್ಯಕ್ತಿಗೆ 3,800 ರೂ. ದರ ನಿಗದಿಪಡಿಸಲಾಗಿದ್ದರೂ, ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಪ್ರವಾಸಿಗರು ದರವನ್ನು ಲೆಕ್ಕಿಸದೆ ಹಂಪಿಯ ಸೌಂದರ್ಯವನ್ನು ಆಕಾಶದಿಂದ ಸವಿಯಲು ಮುಗಿಬಿದ್ದಿದ್ದಾರೆ. ಕಳೆದ ಮೂರು ದಿನಗಳಲ್ಲಿ 1800ಕ್ಕೂ ಅಧಿಕ ಜನರು ಹೆಲಿಕಾಪ್ಟರ್ ಏರಿದ್ದು, ಅಂದಾಜು 66 ಲಕ್ಷ ರೂ.ಗಳಿಗೂ ಅಧಿಕ ಆದಾಯ ಗಳಿಸಿದೆ. 
ಉತ್ಸವದ ಮೊದಲ ದಿನದಿಂದ ಹಿಡಿದು ಸಮಾರೋಪದವರೆಗೂ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜನರಿಂದ ಬೈ ಸ್ಕೈ ಪ್ರವಾಸಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ನಾಲ್ಕನೆಯ ದಿನವೂ ಹೆಲಿಕಾಪ್ಟರ್ ಹಾರಾಟ ಮುಂದುವರಿಯಲಿದೆ.

ವೈಮಾನಿಕ ಪ್ರವಾಸದ ಪ್ರಮುಖ ಆಕರ್ಷಣೆಗಳು

ಪ್ರತಿ ವರ್ಷದಂತೆ ಈ ಬಾರಿಯೂ ಆಯೋಜಿಸಲಾಗಿರುವ ಈ ಹೆಲಿಕಾಪ್ಟರ್ ಸೇವೆಯ ಮೂಲಕ ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಆಕಾಶದ ಎತ್ತರದಿಂದ ನೋಡುವ ಸುವರ್ಣ ಅವಕಾಶ ಲಭಿಸಿದೆ. ಮಾತಂಗ ಪರ್ವತ, ವಿಶ್ವಪ್ರಸಿದ್ಧ ಕಲ್ಲಿನ ರಥ, ವಿರೂಪಾಕ್ಷ ದೇವಾಲಯ, ಉಗ್ರನರಸಿಂಹ ವಿಗ್ರಹ ಮತ್ತು ಸಾಸಿವೆಕಾಳು ಗಣಪ, ಅಂಜನಾದ್ರಿ ಸೇರಿದಂತೆ ಪ್ರಮುಖ ಆಕರ್ಷಣೆಗಳನ್ನು ಪ್ರವಾಸಿಗರು ಆಗಸದಲ್ಲಿ ಕ್ಷಣಾರ್ಧದಲ್ಲಿ ವೀಕ್ಷಿಸಿ ಪುಳಕಿತರಾಗುತ್ತಿದ್ದಾರೆ. ವಿಜಯನಗರದ ವೈಭವವನ್ನು ಕಣ್ತುಂಬಿಕೊಳ್ಳುವ ಈ ಅವಕಾಶವು ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುತ್ತಿದೆ.

ಎಲ್ಲ ವರ್ಗದವರಿಗೂ ಲಭ್ಯವಾದ ಸೌಭಾಗ್ಯ

ಈ ಬಾರಿಯ ವಿಶೇಷವೆಂದರೆ ಕೇವಲ ಶ್ರೀಮಂತರಿಗೆ ಮಾತ್ರವಲ್ಲದೆ, ಸಮಾಜದ ವಿವಿಧ ಸ್ತರದ ಜನರಿಗೂ ಹಂಪಿಯನ್ನು ಆಗಸದಿಂದ ನೋಡುವ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳು, ರೈತರು, ಹಿರಿಯ ನಾಗರಿಕರು, ಪ್ರವಾಸಿಗರು ಹಾಗೂ ಪ್ರವಾಸಿ ಮಾರ್ಗದರ್ಶಿಗಳು ಹೆಲಿಕಾಪ್ಟರ್ ಏರಿ ಸಂಭ್ರಮಿಸಿದರು. ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್ ಪ್ರಯಾಣದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನೆಲದ ಮೇಲೆ ನಿಂತು ಹಂಪಿಯ ಕಲೆ ನೋಡುವುದು ಒಂದು ಅನುಭವವಾದರೆ, ಆಗಸದಿಂದ ಇಡೀ ವಿಜಯನಗರ ಸಾಮ್ರಾಜ್ಯದ ವಿಸ್ತಾರವನ್ನು ನೋಡುವುದು ಒಂದು ದೈವಿಕ ಅನುಭವ.