ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಭಾನುವಾರ ಯುವಕವಿಗೋಷ್ಠಿಯನ್ನು ಸಾಹಿತಿ ಎ.ಎಂ.ಮದರಿ ಉದ್ಘಾಟಿಸಿದರು ಈ ಸಂದರ್ಭ ಸಾಹಿತಿ ಡಾ.ಚನ್ನಬಸವ ಚಿಲಕರಾಗಿ, ವಿದ್ವಾಂಸ ಡಾ. ಎಚ್.ಎಂ. ಚಂದ್ರಶೇಖರ ಶಾಸ್ತ್ರಿ, ಸಿಡಿಪಿಒ ಬೋರೇಗೌಡ, ಕನ್ನಡ ಉಪನ್ಯಾಸಕ ಡಾ.ಎಂ.ಆರ್.ವಾಗೀಶ್ ಇದ್ದರು. ಕಾನೂನು ಶೀರ್ಷಿಕೆ ಕವಿತೆ ಓದಿದ ಪ್ರಿಯಾಂಕಾ ಚಂದ್ರಶೇಖರ. ಕುಸಿದ ಕನಸು ಕವಿತೆ ಪ್ರಸ್ತುತಪಡಿಸಿದ ಅಭಿಲಾಷ ಆಚಾರ್. 
ರಾಜ್ಯ

ಹಂಪಿ ಉತ್ಸವ; ತವಕ-ತುಮಲಗಳ ಪದ ಪೋಣಿಸಿದ ಯುವ ಪ್ರತಿಭೆಗಳು

ಪ್ರಮುಖ ಮುಖ್ಯಾಂಶಗಳು

  • ಸಮಾಜದ ಸಮಸ್ಯೆಗಳಿಗೆ ಕಿವಿಯಾದ ಕವಿಗೋಷ್ಠಿ
  • ವಿರೂಪಾಕ್ಷೇಶ್ವರ ಸನ್ನಿಧಿಯಲ್ಲಿ ಅರಳಿದ ಕವಿತೆಗಳು
ರವೀಂದ್ರ ರಡ್ಡಿ ಹಂಪಿ
ಶಿವರಾತ್ರಿ ಹಿನ್ನೆಲೆ ಉತ್ಸವದ ಮೂರನೇ ದಿನ ಹಂಪಿ ಅಧಿದೈವ ವಿರೂಪಾಕ್ಷೇಶ್ವರನ ಸನ್ನಿಧಾನ ಭಕ್ತರಿಗೆ ಆಶೀರ್ವಾದ ತಾಣವಾದರೆ, ಯುವ ಕವಿಗಳು ಆಗತಾನೆ ಹೆತ್ತ ಶಿಶು ಕವಿತೆಗಳ ಜನ್ಮತಾಣವಾಯಿತು. 34ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳಲ್ಲಿ ಸಮಾಜದ ಸದ್ಯದ ಸ್ಥಿತ್ಯಂತರ, ತವಕ, ತಲ್ಲಣ, ರಾಜಕೀಯ, ಮಹಿಳಾವಾದ ಹಾಗೂ ಶ್ರಮಿಕವಾದದ ಮೇಲೆ ಬೆಳಕು ಚೆಲ್ಲಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.
ಕಾಲೇಜು ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ವಿವಿಧ ಅಧಿಕಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ಕವನ ವಾಚಿಸಿದ್ದು ಕಂಡುಬಂತು. ಆರತಿ ಮಂಜುನಾಥ ಅವರ ‘ಅವಳೆಂದರೆ ಅವಳು’, ಪಿ. ಚೈತ್ರಾ ಅವರ ‘ಮೊದಲ ಮಳೆ’, ಅಭಿಲಾಷ ಆಚಾರ್ ಅವರ ‘ಕುಸಿದ ಕನಸು’, ಬಿ.ಎಂ. ಪ್ರಿಯಾಂಕ ಅವರ ’ಯಾರಿಗೆ ಬಂತು ಸ್ವಾತಂತ್ರ್ಯ’, ಸನಾವುಲ್ಲಾ ಡಿ. ನವಿಲೇಹಾಳ್ ಅವರ ‘ಯಾವ ಕಣ್ಣುಗಳಿಗೆ ಕಾಣಿಸಲಿಲ್ಲ’, 
ಪ್ರಿಯಾಂಕ ಚಂದ್ರಶೇಖರ ಅವರ ’ಕಾನೂನು’, ಅನಿತಾ ಡಿ.ಎಸ್. ಅವರ ‘ಗಾಳಿಪಟ ಮತ್ತು ನಾನು’, ಮೈಲಾರಪ್ಪ ಬೂದಿಹಾಳ ಅವರ ’ಧರ್ಮ’, ಅಯ್ಯಣ್ಣ ನಾಯಕ ಪಾಮನಕಲ್ಲೂರು ಅವರ ’ಚುನಾವಣೆ’, ಮಲ್ಲಮ್ಮ ಯಮನೂರಪ್ಪ ವಡ್ಡರ್ ಅವರ ’ಅನ್ನದಾತ ಕೃಷಿ’, ಎಸ್.ಆರ್. ಶರಣಕುಮಾರ್ ಅವರ ’ಪ್ರಣಯ’ ಹಾಗೂ ಶ್ರೀನಿವಾಸ ನೀಲಕಂಠಪ್ಪ ಮುಕ್ಕುಂದ ಅವರ ’ಭೂಮಿ’ ಕವಿತೆಗಳು ಗಣ್ಯರು ಮತ್ತು ಕೇಳುಗರ ಮೆಚ್ಚುಗೆ ಗಿಟ್ಟಿಸಿದವು. 
ಹಲವರು ಅರ್ಥಪೂರ್ಣವಾಗಿ, ಚಿಂತನೆಗೆ ಹಚ್ಚುವಂತೆ ಹಾಗೂ ಸದ್ಯದ ಕಾನೂನುಗಳನ್ನೇ ಒರೆಗೆ ಹಚ್ಚುವ ರೀತಿಯಲ್ಲಿ ಕಾವ್ಯ ಪ್ರಸ್ತುತಪಡಿಸಿ ಭವಿಷ್ಯದ ಭರವಸೆಯ ಕವಿಗಳಾಗಿ ಹೊರಹೊಮ್ಮುವ ಭರವಸೆ ಮೂಡಿಸಿದ್ದು ವಿಶೇಷವಾಗಿತ್ತು.

ಸಮಾಜದ ಸಮಸ್ಯೆಗಳಿಗೆ ಪರಿಹಾರವಾಗಲಿ

ಕವಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ಅವರು, ಮಹಾಕವಿ ಹರಿಹರ ಹಂಪಿ ವಿರೂಪಾಕ್ಷನ ಕುರಿತು ಕಾವ್ಯ ರಚಿಸಬೇಕೆಂದು ಹೇಳಿದ್ದಾರೆ. ಕಾಲಕ್ಕೆ ತಕ್ಕಂತೆ ಕಾವ್ಯ ರಚನೆಯಾಗಬೇಕು. ಅನುಭವ ಹಾಗೂ ನೈಜತೆಯನ್ನು ಒಳಗೊಂಡಿರಬೇಕು. ಆಯಾ ಕಾಲದ ಇತಿಹಾಸ ದಾಖಲಿಸಬೇಕು ಎಂದರು.
ಕವಿತೆಯು ಸಮಸ್ಯೆಗಳಿಗೆ ಪರಿಹಾರದಂತಿರಬೇಕು. ಹಂಪಿ ಪರಿಸರ, ಬದುಕಿನ ನೈಜ ಘಟನೆ ಹಾಗೂ ಆಧುನಿಕ ತಲ್ಲಣಗಳನ್ನು ಮುಖ್ಯವಾಗಿಟ್ಟುಕೊಂಡು ಕವಿಗಳು ಕವಿತೆ ರಚಿಸಿದ್ದಾರೆ. ಅತ್ಯುತ್ತಮ ಕವಿಗಳು ಹಂಪಿ ವೇದಿಕೆಯಿಂದ ಮೂಡಿಬಂದಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಯುವಕರಿಗೆ ಸಾಹಿತ್ಯದ ರುಚಿ ಹಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ. ಉತ್ತಮ ಕವಿ ಹಾಗೂ ಲೇಖಕರಾಗುವ ಪ್ರತಿಭೆ ಯುವಕರಲ್ಲಿದೆ. 
ಈ ನಿಟ್ಟಿನಲ್ಲಿ ಯುವಕವಿಗೋಷ್ಠಿ ಆಯೋಜಿಸಲಾಗಿದೆ. ಕವನವು ಭಾವನಿಷ್ಠುರದ ಜೊತೆಗೆ ವೈಚಾರಿಕತೆಯನ್ನು ಒಳಗೊಂಡಿರಬೇಕು. ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಗುಣ ಬೆಳೆಸಿಕೊಳ್ಳಬೇಕು. ಆಗ ನಾವು ಕಾವ್ಯ ಹಾಗೂ ಸಾಹಿತ್ಯಕ್ಕೆ ಹತ್ತಿರವಾಗುತ್ತೇವೆ. ಯುವಕರು ಮುಂಜಾವಿನಲ್ಲಿ ಅರಳುವ ಹೂಗಳು. ಅವುಗಳು ಸುಸಂಸ್ಕೃತಿಯ ಘಮ ಪಸರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಸಾಹಿತಿ ಎ.ಎಂ. ಮದರಿ ಕಾರ್ಯಕ್ರಮ್ನ ಉದ್ಘಾಟಿಸಿದರು. ಸಾಹಿತಿ ಡಾ. ಚನ್ನಬಸವ ಚಿಲಕರಾಗಿ ಆಶಯ ನುಡಿಗಳನ್ನಾಡಿದರು. ವಿದ್ವಾಂಸ ಡಾ. ಎಚ್.ಎಂ. ಚಂದ್ರಶೇಖರ ಶಾಸ್ತ್ರಿ, ಸಿಡಿಪಿಒ ಬೋರೇಗೌಡ, ಕನ್ನಡ ಉಪನ್ಯಾಸಕ ಡಾ. ಎಂ.ಆರ್. ವಾಗೀಶ್ ಇತರರು ಉಪಸ್ಥಿತರಿದ್ದರು.