ವಿಚಾರಗೋಷ್ಠಿಯಲ್ಲಿ ಭಾಗಿಯಾಗಿದ್ದ ಜನತೆ
- ವಿಚಾರಗೋಷ್ಠಿಯಲ್ಲಿ ಕನ್ನಡ ವಿವಿ ವಿಸಿ ಡಾ. ಡಿ. ಪರಮಶಿವಮೂರ್ತಿ ಅಭಿಮತ
- ಸಾಮಾಜಿಕ ಸ್ಥಿತಿಗತಿಗಳ ಮೇಲೆ ವಿಶೇಷ ಬೆಳಕು
ಹಂಪಿ: ಜಗತ್ತಿನಲ್ಲಿ ಆಫ್ರಿಕಾ ಮತ್ತು ಗ್ರೀಕ್ ನಾಗರಿಕತೆಗಳ ನಂತರ ಅತಿ ಹೆಚ್ಚು ಸಂಶೋಧನೆಗೆ ಒಳಪಟ್ಟಿರುವ ಹೆಗ್ಗಳಿಕೆ ವಿಜಯನಗರ ಸಾಮ್ರಾಜ್ಯಕ್ಕಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ. ಪರಮಶಿವಮೂರ್ತಿ ಅಭಿಮತ ವ್ಯಕ್ತಪಡಿಸಿದರು.
ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಶುಕ್ರವಾರ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ವಿಜಯನಗರದ ಆಡಳಿತ ವೈಖರಿಯೇ ಒಂದು ವಿಸ್ಮಯ. ಈ ನೆಲದ ರಾಜಕಾರಣ, ಧರ್ಮ ಸ್ಥಾಪನೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಅಡಿಪಾಯದ ಮೇಲೆ ನಡೆದ ಆಳ್ವಿಕೆಯ ಕುರಿತು ಈಗಾಗಲೇ ಅಪಾರ ಸಂಶೋಧನೆಗಳಾಗಿವೆ. ಸಮಾನತೆ ಮತ್ತು ಸೌಹಾರ್ದ ನೆಲೆಯಲ್ಲಿ ಜಾರಿಯಲ್ಲಿದ್ದ ಸುಧಾರಣಾ ಕ್ರಮಗಳು ಇಂದಿಗೂ ಗಮನಸೆಳೆಯುತ್ತವೆ. ಇದೇ ಕಾರಣಕ್ಕೆ ದೇಶ-ವಿದೇಶಗಳ ಸಂಶೋಧಕರು ಹಂಪಿಯತ್ತ ಮುಖ ಮಾಡುತ್ತಿದ್ದಾರೆ.
ಸಮಸಮಾಜದ ಸಾಂಸ್ಕೃತಿಕ ಬೇರುಗಳು ಹುಟ್ಟಿದ್ದೇ ಇಲ್ಲಿ ಎಂಬುದು ವಿಶೇಷ. ಜನಸಾಮಾನ್ಯರ ಭಾವನೆಗಳು ಸಾಮ್ರಾಜ್ಯದೊಂದಿಗೆ ಬೆರೆತಿದ್ದರಿಂದಲೇ ಇಲ್ಲಿನ ಕೀರ್ತಿ ವಿಶ್ವದಾದ್ಯಂತ ಪಸರಿಸಿತು. ಸುವರ್ಣಯುಗ ಸೃಷ್ಟಿಸಿದ ಈ ಆಡಳಿತ ಶೈಲಿಯ ಬಗ್ಗೆ ಇಂದಿಗೂ ಕುತೂಹಲವಿದೆ. ಆದ್ದರಿಂದ ಅರಸರ ಯಶಸ್ಸಿನ ಹಿಂದೆ ಶ್ರಮಿಸಿದ ಜನಸಾಮಾನ್ಯರ ಕುರಿತು ಹೆಚ್ಚಿನ ಅಧ್ಯಯನಗಳು ನಡೆಯುವ ಅಗತ್ಯವಿದೆ ಎಂದರು.
ವಿದ್ವತ್ತು ಮಂಡಿಸಿದ ಸಂಶೋಧಕರು
ಗೋಷ್ಠಿಯಲ್ಲಿ ಸಂಶೋಧಕರು ಹಾಗೂ ಚಿಂತಕರು ಹಂಪಿ ಬಗೆಗೆ ತಮ್ಮದೇ ಅಧ್ಯಯನ ಮೂಲದಿಂದ ಹೆಕ್ಕಿ ತೆಗೆದ ವಿಚಾರಗಳನ್ನು ಮಂಡಿಸಿದರು. ಪ್ರೌಢದೇವರಾಯನ ಕಾಲದ ಸಾಹಿತ್ಯ ಕುರಿತು ಲೇಖಕ ಡಾ. ಎಂ. ಎಂ. ಶಿವಪ್ರಕಾಶ್ ಮಾಹಿತಿ ಹಂಚಿಕೊಂಡು, ಅಂದಿನ ಶರಣರು ಮತ್ತು ಸಾಹಿತ್ಯದ ಬಗ್ಗೆ ವಿವರಿಸಿದರು. ಮಹಿಳಾ ಚಿಂತಕಿ ಟಿ. ಎಚ್. ಎಂ. ಅಕ್ಕನಾಗಮ್ಮ ವಿಜಯನಗರ ಕಾಲದ ಮಹಿಳೆಯರ ಸ್ಥಿತಿಗತಿ ಕುರಿತು ಮಾತನಾಡಿದರು.
ಹಂಪಿಯ ಪಾವಿತ್ರ್ಯತೆ ಉಳಿಸುವಲ್ಲಿ ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಕೊಡುಗೆ ಕುರಿತು ಶರಣಯ್ಯ ಎಸ್. ಚರೇದ ಮಾಹಿತಿ ನೀಡಿದರು. ಸಂಶೋಧಕ ಹಾಗೂ ಲೇಖಕ ಡಾ. ಜಾಜಿ ದೇವೇಂದ್ರಪ್ಪ ಆಶಯ ನುಡಿಗಳನ್ನಾಡಿದರು. ಕಸಾಪ ಬಳ್ಳಾರಿ ಜಿಲ್ಲಾಧ್ಯಕ್ಷ ನಿಷ್ಠಿರುದ್ರಪ್ಪ, ಹೊಸಪೇಟೆ ತಾಲೂಕು ಅಧ್ಯಕ್ಷ ಡಾ. ಗುಂಡಿ ಮಾರುತಿ, ಕೊಪ್ಪಳ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಉಪಸ್ಥಿತರಿದ್ದರು.