ಹಂಪಿ ಉತ್ಸವದಲ್ಲಿ ಪುಸ್ತಕ ಮಳಿಗೆ ಬಳಿ ಜನ ವಿರಳವಾಗಿರುವುದು.
- ರವಿಬೆಳೆಗೆರೆ-ಬೈರಪ್ಪ ಪುಸ್ತಕಗಳಿಗಷ್ಟೇ ಬೇಡಿಕೆ
- ಪುಸ್ತಕ ಮಾರಾಟಗಾರರಲ್ಲಿ ಮೂಡಿದ ನಿರಾಸೆ
ಹಂಪಿ: ಉತ್ಸವವು ಜನರ ಮನರಂಜನೆ ಮತ್ತು ಉತ್ಸಾಹ ಹೆಚ್ಚಿಸಿದೆಯಾದರೂ ಸಾಹಿತ್ಯಾಸಕ್ತರ ಬರವೂ ಎದುರಾಯಿತು. ಮೂರು ದಿನಗಳ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ನಿರೀಕ್ಷೆಯಂತೆ ಪುಸ್ತಕಗಳು ಮಾರಾಟವಾಗಲಿಲ್ಲ ಎಂದು ಮಾರಾಟಗಾರರು ವಿಜಯವಾಣಿಯೊಂದಿಗೆ ಬೇಸರ ವ್ಯಕ್ತಪಡಿಸಿದರು.
ಈ ಬಾರಿ ಕೇವಲ ಏಳು ಪುಸ್ತಕ ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಉತ್ಸವದಲ್ಲಿ ಲಕ್ಷಾಂತರ ಜನರು ಕಂಡುಬಂದರೂ, ಪುಸ್ತಕ ಮಳಿಗೆಗಳ ಮೇಲೆ ಕಣ್ಣಾಯಿಸಿ ಸುಮ್ಮನೆ ತೆರಳಿದವರೇ ಅಧಿಕ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಾಹಿತ್ಯ ಪುಸ್ತಕಗಳನ್ನು ಕೊಂಡುಕೊಂಡರು.
ಪ್ರಸ್ತುತ ಸಾಮಾಜಿಕ ಜಾಲತಾಣಗಳ ಅಬ್ಬರ ಜೋರಾಗಿದ್ದು, ರವಿ ಬೆಳಗೆರೆ ಅವರ ‘ಹೇಳಿ ಹೋಗು ಕಾರಣ’ ಪುಸ್ತಕದಲ್ಲಿನ ಸಾಲುಗಳನ್ನು ಆಧರಿಸಿ ಅನೇಕ ರೀಲ್ಸ್‌ಗಳು ಹರಿದಾಡುತ್ತಿವೆ. ಈ ಕಾರಣದಿಂದಾಗಿ ಬಹುತೇಕ ಯುವ ಓದುಗರು ಮತ್ತು ಮಹಿಳಾ ಓದುಗರು ಅದೇ ಪುಸ್ತಕವನ್ನು ಹುಡುಕಿಕೊಂಡು ಬಂದು ಖರೀದಿಸಿದರು. ಒಂದು ಪುಸ್ತಕ ಮಳಿಗೆಯೊಂದರಲ್ಲೇ ಈ ಕೃತಿಯ 200 ರಿಂದ 250 ಪ್ರತಿಗಳು ಮಾರಾಟವಾಗಿರುವುದು ವಿಶೇಷವಾಗಿದೆ. ಇದರ ಜೊತೆಗೆ ನವ್ಯ ಸಾಹಿತ್ಯದ ಪುಸ್ತಕಗಳು ಹಾಗೂ ಹೆಸರಾಂತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದವು.
ಬೇಡಿಕೆ ಕಳೆದುಕೊಂಡ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು
ಇತ್ತೀಚೆಗೆ ಎಲ್ಲೆಡೆ ಸ್ಪರ್ಧೆ ಹೆಚ್ಚಿದೆ, ಅದರಲ್ಲೂ ಸರ್ಕಾರಿ ಹುದ್ದೆಗಳಿಗೆ ಇನ್ನಿಲ್ಲದ ಪೈಪೋಟಿ ಇದೆ. ಹೀಗಾಗಿ ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು ಹೆಚ್ಚಿನ ಪ್ರಮಾಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಗಳನ್ನು ಒಳಗೊಂಡ ಪುಸ್ತಕಗಳನ್ನು ತಂದಿದ್ದರು. ಆದರೆ, ಸರ್ಕಾರವು ಇತ್ತೀಚೆಗೆ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದರಿಂದ ಈ ಪುಸ್ತಕಗಳಿಗೂ ಬೇಡಿಕೆ ತಗ್ಗುವಂತಾಗಿದೆ ಎಂದು ಮಾರಾಟಗಾರರು ಅಭಿಪ್ರಾಯಪಟ್ಟರು.
ನವ್ಯ ಸಾಹಿತ್ಯ ಪುಸ್ತಕಕ್ಕೆ ಬೇಡಿಕೆ ಹೆಚ್ಚಿದೆ. ರವಿ ಬೆಳಗೆರೆ ಅವರ ‘ಹೇಳಿ ಹೋಗು ಕಾರಣ’ ಹಾಗೂ ಇನ್ನಿತರ ಪುಸ್ತಕಗಳು ಮಾರಾಟ ಆಗಿವೆ. ಮಳಿಗೆಗೆ ನಾಲ್ಕು ಸಾವಿರ ರೂಪಾಯಿ ಬಾಡಿಗೆ ನೀಡಿದ್ದೇವೆ. ಆದರೆ, ನಮಗೆ ಐಡಿ ಕಾರ್ಡ್ ನೀಡಿಲ್ಲ. ಇದರಿಂದಾಗಿ ಮಳಿಗೆಗೆ ಪುಸ್ತಕಗಳನ್ನು ತರಲು ಸಮಸ್ಯೆಯಾಗಿದೆ. ಆಯೋಜಕರು ಸರಿಯಾಗಿ ಸೌಲಭ್ಯ ಕಲ್ಪಿಸಬೇಕು ಮತ್ತು ಹೆಚ್ಚಿನ ಪುಸ್ತಕ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಬೇಕು. ಪಾಲಕರು ಮಕ್ಕಳಿಗೆ ಮೊಬೈಲ್ ನೀಡುವ ಬದಲು ಉತ್ತಮ ಪುಸ್ತಕಗಳನ್ನು ಕೊಡಿಸಿ ಓದುವ ಸಂಸ್ಕೃತಿ ಬೆಳೆಸಬೇಕು.