ಕಮಲಾಪುರ ಕೆರೆಯಲ್ಲಿ ವಿಹಾರಿಗಳಿಲ್ಲದೆ ಖಾಲಿ ನಿಂತಿರುವ ದೋಣಿಗಳು
- ಪ್ರವಾಸಿಗರ ಜೇಬಿಗೆ ಕತ್ತರಿ
- ಸಾರ್ವಜನಿಕರ ನಿರಾಸಕ್ತಿ
- ಮೀನುಗಾರಿಕೆ ಇಲಾಖೆ ಆಯೋಜನೆ
ಹಂಪಿ: ಉತ್ಸವದ ನಿಮಿತ್ತ ಮೂರು ದಿನಗಳ ಕಾಲ ಕಮಲಾಪುರದ ಕೆರೆಯಲ್ಲಿ ಮೀನುಗಾರಿಕೆ ಇಲಾಖೆ ಹಮ್ಮಿಕೊಂಡಿರುವ ದೋಣಿ ವಿಹಾರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆರೆಯನ್ನು ಒಂದು ಸುತ್ತು ಬರಲು ದೋಣಿಯಲ್ಲಿ ಗುಂಪಿನಲ್ಲಿ ಒಬ್ಬರಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಇಬ್ಬರೇ ಸವಾರಿ ಮಾಡಲು 300 ರಿಂದ 400 ರೂ. ದರವಿದೆ. ವಿಹಾರ ಮಾಡುವವರಿಗೆ ಸುರಕ್ಷಾ ಜಾಕೆಟ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂಜಾನೆ ಹಾಗೂ ಮುಸ್ಸಂಜೆ ವೇಳೆ ಕಮಲಾಪುರ ಕೆರೆಯ ಸುತ್ತಲಿನ ಬೆಟ್ಟಗುಡ್ಡಗಳು ಮತ್ತು ಕಣಿವೆಗಳ ನೋಟವು ಪ್ರತಿಯೊಬ್ಬರಲ್ಲಿನ ಕವಿ ಮನಸ್ಸನ್ನು ಜಾಗೃತಗೊಳಿಸುತ್ತದೆ.
ದೂರದ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡಗಳನ್ನು ನೋಡುತ್ತಾ, ದೋಣಿ ಆಟವಾಡಿ ಎಂಬ ಕವಿವಾಣಿಯು ಇಲ್ಲಿ ನೆನಪಿಗೆ ಬರುತ್ತದೆ. ಜೀವನದ ಜಂಜಾಟಗಳನ್ನು ಮರೆತು ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರು ಮತ್ತು ಪ್ರವಾಸಿಗರು ದೋಣಿ ವಿಹಾರದ ವಿಶಿಷ್ಟ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು. ಆದರೆ, ವಿಹಾರದ ದರವು ಪ್ರವಾಸಿಗರಿಗೆ ಹೊರೆಯಾಗಿ ಪರಿಣಮಿಸಿದೆ.