ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ
- ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ
- ಒಂದು ವರ್ಷದ ಮಟ್ಟಿಗೆ ತಯಾರಿಕೆ-ಮಾರಾಟಕ್ಕೆ ಸರ್ಕಾರ ಬ್ರೇಕ್
- ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆದೇಶ ಜಾರಿಗೆ
ಬೆಂಗಳೂರು: ಆರೋಗ್ಯ ಸುರಕ್ಷತೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ರಾಜ್ಯದಲ್ಲಿ ಒಂದು ವರ್ಷದ ಮಟ್ಟಿಗೆ ಗುಟ್ಕಾ ಮತ್ತು ಪಾನ್ ಮಸಾಲಾವನ್ನು ನಿಷೇಧಿಸಿ (Gutka Pan Masala Ban in Karnataka) ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಬಿಡುಗಡೆಯಾಗಿರುವ ಆದೇಶ ಪತ್ರದ ಪ್ರಾಕಾರ, ಮುಂದಿನ ಒಂದು ವರ್ಷದ ಮಟ್ಟಿಗೆ ರಾಜ್ಯದಲ್ಲಿ ಪಾನ್ ಮಸಾಲಾ ಹಾಗೂ ಗುಟ್ಕಾದ ತಯಾರಿಕೆ, ದಾಸ್ತಾನು, ಸಾಗಾಟ ಹಾಗೂ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ನಿಷೇಧ ಮಾಡಲಾದ ಉತ್ಪನ್ನಗಳಲ್ಲಿ ತಂಬಾಕು ಮಿಶ್ರಿತ ಹಾಗೂ ತಂಬಾಕನ್ನು ಪ್ರತ್ಯೇಕವಾಗಿ ಸೇರಿಸುವ ಎರಡೂ ರೀತಿಯ ಗುಟ್ಕಾ, ಪಾನ್ ಮಸಾಲಾಗಳನ್ನು ಬ್ಯಾನ್ ಮಾಡಲಾಗಿದೆ.
ಆದ್ದರಿಂ, ಮುಂದಿನ ಒಂದು ವರ್ಷದವರೆಗೆ ಈ ಆದೇಶ ಜಾರಿಯಲ್ಲಿರಲಿದ್ದು, ಈ ಆದೇಶವನ್ನು ಮೀರುವ ತಯಾರಕರು, ವಿತರಕರು ಹಾಗೂ ಚಿಲ್ಲರೆ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.
ವ್ಯಸನಮುಕ್ತ ಕರ್ನಾಟಕ!
ಬುಧವಾರ (ಆ.12) ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಬಂದಿರುವ ಈ ಆದೇಶದಂತೆ, ಈ ಆದೇಶ ಜಾರಿಯಾದ ದಿನದಿಂದ ಸೂಚಿಸಲಾಗಿರುವ ಎಲ್ಲಾ ನಿಯಮಗಳು ಜಾರಿಯಲ್ಲಿ ಬರಲಿದೆ ಎಂದು ತಿಳಿಸಲಾಗಿದೆ.
ಅಂತೆಯೇ ಈ ಆದೇಶವನ್ನು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ರ ಸೆಕ್ಷನ್ 30 ರ ಉಪ-ವಿಭಾಗ (2) ರ ಷರತ್ತು (ಎ) ರ ಅಡಿಯಲ್ಲಿ ಮತ್ತು ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು) ನಿಯಮಗಳು, 2011 ರ ನಿಯಮ 2.3.4 ರ ಅನ್ವಯ ಜಾರಿಗೊಳಿಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಹಾಗೆಯೇ ವ್ಯಸನಮುಕ್ತ ಕರ್ನಾಟಕವನ್ನು ನಿರ್ಮಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಸಾರ್ವಜನಿಕರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗೆಯೇ ಅಕ್ರಮವಾಗಿ ಗುಟ್ಕಾ, ಪಾನ್ ಮಸಾಲಾದ ಮಾರಾಟ ಕಂಡುಬಂದಲ್ಲಿ ಪೊಲೀಸರಿಗೆ ದೂರನ್ನು ನೀಡಬೇಕೆಂದು ಹೇಳಿದ್ದಾರೆ.