ಕೆಂಭಾವಿ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡ ಮಾಸಿಕ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಶಾಸಿ ಉದ್ಘಾಟಿಸಿದರು. ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯರ, ಡಾ.ಯಂಕನಗೌಡ, ಯಮುನೇಶ, ಶರಣಕುಮಾರ, ನಿಜಗುಣಿ ಇತರರಿದ್ದರು.
- ಪುರಾಣಿಕ ಮಲ್ಲಿಕಾರ್ಜುನ ಶಾಸಿ ಅನಿಸಿಕೆ
- ಕೆಂಭಾವಿಯಲ್ಲಿ ಮಾಸಿಕ ಶಿವಾನುಭವ ಗೋಷ್ಠಿ
ಕೆಂಭಾವಿ: ನಾವು ಮಾಡುವ ಶ್ರೇಷ್ಠ ಕರ್ಮಗಳಿಂದ ಗುರುದೆಸೆ ಶುಕ್ರದೆಸೆ ತಾನಾಗಿಯೇ ಬರುತ್ತಿದ್ದು, ಜೀವನದಲ್ಲಿ ಶ್ರೇಷ್ಠ ಕರ್ಮಗಳನ್ನು ಮಾಡಿ ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಐನಾಪುರದ ಪುರಾಣಿಕ ಮಲ್ಲಿಕಾರ್ಜುನ ಶಾಸಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದಿಂದ ಸೋಮವಾರ ಹಮ್ಮಿಕೊಂಡ ಮಾಸಿಕ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗದ ಜನರು ಮೆಚ್ಚಿದರೇನಂತೆ ಜಗದೊಡೆಯ ಮೆಚ್ಚುವಂತೆ ಬದುಕಿದರೆ ಜನುಮ ಸಾರ್ಥಕವಯ್ಯ ಎಂಬ ಶಿವಶರಣರ ವಾಣಿಯಂತೆ ನಾವು ನಮ್ಮ ತೋರಿಕೆಗೆ ಭಕ್ತಿ ಮಾಡದೆ ಗುರುಗಳ, ಭಗವಂತನ ಮೇಲೆ ಅಚಲವಾದ ನಂಬಿಕೆ, ವಿಶ್ವಾಸ ಇಟ್ಟು ಭಕ್ತಿ ಮಾಡಿದಾಗ ಮಾತ್ರ ನಮಗೆ ಜೀವನದಲ್ಲಿ ಮುಕ್ತಿ ದೊರಕಲು ಸಾಧ್ಯ ಎಂದರು.
ದ್ವೇಷ ಅಸೂಯೆ ಸೇರಿ ಹಲವು ವಾಮಮಾರ್ಗಗಳು ಮಾನವನ ಮನಸ್ಸನ್ನು ಕಲುಷಿತಗೊಳಿಸಿ ನೆಮ್ಮದಿ ಹಾಳು ಮಾಡುತ್ತದೆ. ನಾವು ಇಂಥ ಮಠ ಮಾನ್ಯಗಳಿಗೆ ಆಗಮಿಸಿ ನಕಾರಾಯತ್ಮ ಭಾವನೆ ತೊರೆದು ಸಕಾರಾತ್ಮಕ ಭಾವನೆಯಿಂದ ನಿತ್ಯ ಭಕ್ತಿ ಮಡಿದಾಗ ಮಾತ್ರ ಗುರುಗಳ, ದೇವರ ಅನುಗ್ರಹ ನಮ್ಮ ಮೇಲೆ ಆಗಲು ಸಾಧ್ಯ ಎಂದರು.
ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಯಮುನೇಶ ಯಾಳಗಿ ಮತ್ತು ಶರಣಕುಮಾರ ಯಾಳಗಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಿಜಗುಣಿ ವಿಶ್ವಕರ್ಮ, ಇಲಿಯಾಸ್ ಪಟೇಲ್, ಅಭಿಷೇಕ ಪಾಟೀಲ್ ಇದ್ದರು. ಡಾ.ಯಂಕನಗೌಡ ನಿರೂಪಿಸಿ ವಂದಿಸಿದರು.