ಜಮಖಂಡಿ ನಗರದ ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ ಗುರುದೇವ ಡಾ.ಆರ್.ಡಿ.ರಾನಡೆ ಅವರ ಅಧ್ಯಯನಕ್ಕಾಗಿ ತುಲನಾತ್ಮಕ ಮತ್ತು ಆಧ್ಯಾತ್ಮಿಕ ಅನುಭಾವ ಅಧ್ಯಯನ ಕೇಂದ್ರವನ್ನು ಶಾಸಕ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ನಿವೃತ್ತ ಹಿರಿಯ ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಆನಂದ ನ್ಯಾಮಗೌಡ, ಕುಲಪತಿ ಪ್ರೊ.ಆನಂದ್ ಎಸ್. ದೇಶಪಾಂಡೆ ಎಂ.ಬಿ. ಜಿರಲಿ, ಕುಲಸಚಿವ ಸೋಮಲಿಂಗ ಗೆಣ್ಣೂರ ಇದ್ದಾರೆ.
- ಶಾಸಕ ನಾಡೋಜ ಜಗದೀಶ ಗುಡಗುಂಟಿ ಅಭಿಮತ
- ಆಧ್ಯಾತ್ಮಿಕ ಅನುಭಾವ ಅಧ್ಯಯನ ಕೇಂದ್ರ ಉದ್ಘಾಟನೆ
ಜಮಖಂಡಿ: ಜ್ಞಾನ, ಅಧ್ಯಾತ್ಮ ಮತ್ತು ತತ್ವಚಿಂತನೆಯ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ ಮಹಾನ್ ತತ್ವಜ್ಞಾನಿ ಗುರುದೇವ ರಾನಡೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗುರುದೇವ ಡಾ.ಆರ್.ಡಿ.ರಾನಡೆ ಅವರ ಅಧ್ಯಯನಕ್ಕಾಗಿ ತುಲನಾತ್ಮಕ ಮತ್ತು ಆಧ್ಯಾತ್ಮಿಕ ಅನುಭಾವ ಅಧ್ಯಯನ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಗುರುದೇವ ರಾನಡೆ ಅವರ ಚಿಂತನೆಗಳು ಯುವಜನರಿಗೆ ಜ್ಞಾನ, ಶಿಸ್ತು, ಆತ್ಮವಿಶ್ವಾಸ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿವೆ. ಇಲ್ಲಿನ ವಿದ್ಯಾರ್ಥಿಗಳು ಅವರ ಚಿಂತನೆ ಕುರಿತು ಅಧ್ಯಯನ ಮಾಡುವ ಮೂಲಕ ಮುತ್ತು ರತ್ನಗಳಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ಒಡಿಸ್ಸಾದ ಹೈಕೋರ್ಟ್ ನಿವೃತ್ತ ಹಿರಿಯ ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್ ಮಾತನಾಡಿ, ವಿಜ್ಞಾನ ಮತ್ತು ತತ್ವಶಾಸದ ಸಮನ್ವಯವೇ ಮಾನವಕುಲದ ಒಳಿತಿಗೆ ದಾರಿ ತೋರಿಸಬಲ್ಲದು. ಗುರುದೇವ ರಾನಡೆ ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು, ಜಮಖಂಡಿಯಂತಹ ಪುಣ್ಯಭೂಮಿಯಲ್ಲಿ ಇಂತಹ ಅಧ್ಯಯನ ಕೇಂದ್ರ ಸ್ಥಾಪನೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಗುರುದೇವ ರಾನಡೆ ಅವರು ಜಗತ್ತಿಗೆ ಆಧ್ಯಾತ್ಮಿಕ ಚಿಂತನೆಯ ಬೆಳಕು ನೀಡಿದ ಮಹಾನ್ ತತ್ವಜ್ಞಾನಿಯಾಗಿದ್ದು, ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಯಾಗಿರುವುದು ಜಮಖಂಡಿಗೆ ಹೆಮ್ಮೆ. ಬಾಗಲಕೋಟ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಜಾಗ ಹಾಗೂ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ವಿದ್ಯಾರ್ಥಿಗಳು ಆಧ್ಯಾತ್ಮಿಕ ಚಿಂತನೆಯೊಂದಿಗೆ ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅಗತ್ಯವಿರುವ ಜಾಗ ಹಾಗೂ ಮೂಲಸೌಕರ್ಯ ಒದಗಿಸಲು ಸರ್ಕಾರದ ಮಟ್ಟದಲ್ಲಿ ಸಹಕಾರ ನೀಡುವುದಾಗಿ ಹೇಳಿದರು.
ಬೆಳಗಾವಿ ಎಸಿಪಿಆರ್ ಗೌರವ ಕಾರ್ಯದರ್ಶಿ ಎಂ.ಬಿ. ಜಿರಲಿ ಮಾತನಾಡಿ, ಒಂದು ಜಗತ್ತು, ಒಂದು ದೇವರು, ಒಂದು ಮಾನವಕುಲ ಎಂಬುದು ಗುರುದೇವ ರಾನಡೆ ಅವರ ಚಿಂತನೆಯ ಪ್ರಮುಖ ಆಶಯವಾಗಿದ್ದು, ವಿವಿಧ ಧರ್ಮ, ದರ್ಶನ ಹಾಗೂ ಆಧ್ಯಾತ್ಮಿಕ ಪರಂಪರೆಗಳ ನಡುವೆ ಸಮನ್ವಯ ಬೆಳೆಸುವುದು ಅವರ ಉದ್ದೇಶವಾಗಿತ್ತು ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆನಂದ ಎಸ್. ದೇಶಪಾಂಡೆ ಮಾತನಾಡಿ, ಗುಣಮಟ್ಟದ ಶಿಕ್ಷಣ, ಸಂಶೋಧನೆ, ಭಾರತೀಯ ಜ್ಞಾನ ಪರಂಪರೆ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೇಂದ್ರದ ಮೂಲಕ ಸಂಶೋಧನೆ, ಉಪನ್ಯಾಸಮಾಲೆ, ವಿಚಾರ ಸಂಕಿರಣ, ಸಂಶೋಧನಾ ಪ್ರಕಟಣೆ ಹಾಗೂ ವಿದ್ಯಾರ್ಥಿವೇತನ ಸೇರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಹಣಕಾಸು ಅಧಿಕಾರಿ ಪ್ರೊ.ಚಿದಾನಂದ ಢವಳೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಸೋಮಲಿಂಗ ಗೆಣ್ಣೂರ ಸ್ವಾಗತಿಸಿದರು. ವಿಧ್ಯಾರ್ಥಿನಿ ಭಾಗ್ಯಶ್ರೀ ಸಿದ್ದಾಪುರ ನಿರೂಪಿಸಿದರು. ಪ್ರೊ.ಲತಾ ಕೆ.ಪಿ ವಂದಿಸಿದರು.