ಮೊಟ್ಟೆ ದರ ಕುಸಿತ  
ರಾಜ್ಯ

ಕೊಲ್ಲಿ ಸಮರ, ತಗ್ಗಿದ ಮೊಟ್ಟೆ ದರ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ಶಾಲೆಗಳಿಗೆ ರಜೆ, ವಾಣಿಜ್ಯ ಅಡುಗೆ ಅನಿಲ ಅಭಾವವೂ ಕಾರಣ
  • * ಮಳೆಗಾಲ, ಚಳಿಗಾಲದಲ್ಲಿ ವ್ಯಾಪಾರ ಚುರುಕು ಸಾಧ್ಯತೆ
ಬೆಂಗಳೂರು: ಕೊಲ್ಲಿ ಯುದ್ಧದಿಂದ ಕೃಷಿ ಮಾರುಕಟ್ಟೆ ಮೇಲೆ ಮಾತ್ರವಲ್ಲದೆ ಕುಕ್ಕುಟೋದ್ಯಮದ ಮೇಲೂ ಹೊಡೆತ ಬಿದ್ದಿದ್ದು, ಆ ಭಾಗದ ರಾಷ್ಟ್ರಗಳಿಗೆ ನಿತ್ಯ ರ‌್ತಾಗುತ್ತಿದ್ದ 60-70 ಲಕ್ಷ ಮೊಟ್ಟೆಗಳ ರವಾನೆ ಸ್ಥಗಿತಗೊಂಡಿದೆ. ಜತೆಗೆ ಮೊಟ್ಟೆ ದರವೂ ಇಳಿಕೆಯಾಗಿದೆ.
ಮೊಟ್ಟೆ ದರ ಇಳಿಕೆಗೆ ಒಂದೆಡೆ ಯುದ್ಧ ಕಾರಣವಾದರೆ, ಮತ್ತೊಂದೆಡೆ ಬೇಸಿಗೆಯೂ ಪರಿಣಾಮ ಬೀರುತ್ತಿದೆ. ಶಾಲೆಗಳಿಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಾತ್ಕಾಲಿಕ ಸ್ಥಗಿತಗೊಂಡಿದೆ. ಜತೆಗೆ ವಾಣಿಜ್ಯ ಅಡುಗೆ ಅನಿಲ ಅಭಾವದಿಂದಾಗಿ ಬಹುತೇಕ ಬೀದಿಬದಿಯ ತಳ್ಳುಗಾಡಿ ಹೋಟೆಲ್‌ಗಳ (ಆಮ್ಲೆಟ್, ಎಗ್‌ರೈಸ್) ಸಂಖ್ಯೆ ಕಡಿಮೆಯಾಗಿದೆ. ಇವಲ್ಲದೆ ಮೊಟ್ಟೆ ಸೇವನೆಯಿಂದ ದೇಹದ ಉಷ್ಣಾಂಶ ಹೆಚ್ಚಲಿದೆ ಎಂಬ ಕಾರಣದಿಂದ ಸೇವನೆ ಪ್ರಮಾಣವೂ ಕಡಿಮೆ ಇರುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಮೊಟ್ಟೆ ದರ ಕುಸಿತ ಕಂಡಿದೆ.
ರಾಜ್ಯದಲ್ಲಿ 2.50 ಕೋಟಿ ಕೋಳಿಗಳಿದ್ದು, ನಿತ್ಯ 2.20 ಕೋಟಿ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಆದರೆ ಬೆಂಗಳೂರಿಗೆ ಅಗತ್ಯವಿರುವ 90 ಲಕ್ಷ ಮೊಟ್ಟೆಯಲ್ಲಿ ಶೇ.40 ತಮಿಳುನಾಡಿನ ನಾಮಕ್ಕಲ್‌ನಿಂದ ಪೂರೈಕೆಯಾಗುತ್ತದೆ. ಉಳಿದಂತೆ ಹೊಸಪೇಟೆ, ದಾವಣಗೆರೆ, ಚಳ್ಳಕೆರೆ ಸೇರಿ ರಾಜ್ಯದ ಇತರೆ ಭಾಗಗಳಿಂದ ಬರುತ್ತದೆ. ಆದರೆ ಬಹುತೇಕ ಆಯಾ ಭಾಗಗಳಿಗೆ ಬೇಡಿಕೆಯಿರುವಷ್ಟು ಮೊಟ್ಟೆಯನ್ನು ಆ ಭಾಗದಲ್ಲಿಯೇ ಕೋಳಿ ಸಾಕಣೆದಾರರು ಉತ್ಪಾದನೆ ಮಾಡಿಕೊಳ್ಳುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಲಭ್ಯವಿದ್ದು, ದರ ತಗ್ಗಿದೆ.
ಬೆಂಗಳೂರಿನಲ್ಲಿ ಸಗಟು ದರದಲ್ಲಿ ಪ್ರತಿ ಮೊಟ್ಟೆ 4.65 ರೂ. ಇದ್ದರೆ ಚಿಲ್ಲರೆ ದರದಲ್ಲಿ 5ರಿಂದ 5.30ರವರೆಗೆ ಮಾರಾಟವಾಗುತ್ತಿದೆ. ಇದು ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ, ಹೈದರಾಬಾದ್, ನಾಮಕ್ಕಲ್ ಸೇರಿ ದೇಶದಾದ್ಯಂತ ಮೊಟ್ಟೆ ದರದಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಈ ಹಿಂದೆ ಸಗಟು ದರದಲ್ಲಿ ಪ್ರತಿ ಮೊಟ್ಟೆಗೆ 5 ರೂ. ಇತ್ತು. ಚಿಲ್ಲರೆ ದರದಲ್ಲಿ 6 ರಿಂದ 7 ರೂ., ಕೆಲವೆಡೆ 7.50 ರೂ. ವರೆಗೂ ಮಾರಾಟವಾಗುತ್ತಿತ್ತು. ಇದೀಗ 5ರಿಂದ 5.50 ರೂ.ಗೆ ಇಳಿಕೆಯಾಗಿದೆ.

ಕೊಲ್ಲಿ ಯುದ್ಧ, ವಾಣಿಜ್ಯ ಅಡುಗೆ ಅನಿಲದ ಅಭಾವ, ಶಾಲೆಗಳಿಗೆ ರಜೆ ಇತ್ಯಾದಿ ಕಾರಣಗಳಿಂದಾಗಿ ಮೊಟ್ಟೆ ದರ ಇಳಿಕೆಯಾಗಿದೆ. ಮಳೆಗಾಲಕ್ಕೆ ವ್ಯಾಪಾರ ಚುರುಕು ಪಡೆಯಲಿದೆ. ಇದೀಗ ಕದನ ವಿರಾಮ ಘೋಷಣೆ ಆಗಿರುವುದರಿಂದ ಮೊಟ್ಟೆಗಳ ರ್ತು ಮತ್ತೆ ಹಳಿಗೆ ಬರಬಹುದು ಎಂಬ ಭರವಸೆ ಮೂಡಿದೆ.